ನವದೆಹಲಿ: ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಣಾಧಿಕಾರಿಗಳ ನೇಮಕ ಹಾಗೂ ಸೇವಾ ಷರತ್ತುಗಳನ್ನು ನಿಯಂತ್ರಿಸುವ ಮಸೂದೆಗೆ ರಾಜ್ಯಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
‘ಮುಖ್ಯ ಚುನಾವಣಾಧಿಕಾರಿ ಹಾಗೂ ಇತರೆ ಚುನಾವಣಾಧಿಕಾರಿಗಳ (ನೇಮಕಾತಿ, ಸೇವಾ ನಿಯಮ ಹಾಗೂ ಅಧಿಕಾರವಧಿ) ಮಸೂದೆ 2023’ಕ್ಕೆ ಮೇಲ್ಮನೆಯಲ್ಲಿ ಧ್ವನಿ ಮತದ ಒಪ್ಪಿಗೆ ಲಭಿಸಿತು.
1991ರ ಕಾನೂನಿಗೆ ಬದಲಾಗಿ ಈ ಮಸೂದೆಯನ್ನು ಆಗಸ್ಟ್ 10ರಂದು ಸರ್ಕಾರ ಮಂಡಿಸಿತ್ತು.
ಮಸೂದೆಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಕಾನೂನು ಸಚಿವ ಅರ್ಜುನ್ ಮೇಘಾವಾಲ್, ಈ ಹಿಂದಿನ ಕಾನೂನಿನಲ್ಲಿ ಲೋಪಗಳು ಇದ್ದಿದ್ದರಿಂದ ಹೊಸ ಮಸೂದೆ ಮಂಡಿಸಲಾಗಿದೆ ಎಂದರು.
ಮುಖ್ಯ ಚುನಾವಣಾಧಿಕಾರಿ ಹಾಗೂ ಚುನಾವಾಣಾಧಿಕಾರಿಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ತಪ್ಪಿಸಿಕೊಳ್ಳಲು ಈ ಮಸೂದೆಯನ್ನು ತರಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಅವರು ತಳ್ಳಿಹಾಕಿದರು.
‘ಈ ಮಸೂದೆ, ಸುಪ್ರೀಂ ಕೋರ್ಟ್ ತೀರ್ಪಿನ ನಿರ್ದೇಶನಕ್ಕೆ ಅನುಗುಣವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಅಧಿಕಾರದ ವಿಂಗಡನೆಯನ್ನು ಖಚಿತಪಡಿಸುತ್ತದೆ‘ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.