ADVERTISEMENT

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯಸಭೆಯಲ್ಲಿ ಇಂದು ಬೀಳ್ಕೊಡುಗೆ

ಪಿಟಿಐ
Published 8 ಆಗಸ್ಟ್ 2022, 4:10 IST
Last Updated 8 ಆಗಸ್ಟ್ 2022, 4:10 IST
   

ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಇಂದು (ಆ.8, ಸೋಮವಾರ)ಸದನದಲ್ಲಿ ಬೀಳ್ಕೊಡುಗೆ ನೀಡಲಾಗುವುದು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಇತರ ನಾಯಕರು ಉಪಸ್ಥಿತರಿರಲಿದ್ದಾರೆ.

ನಾಯ್ಡು ಅವರುಆಗಸ್ಟ್‌ 11 ರಂದು ಅಧಿಕಾರದಿಂದ ಕೆಳಗಿಳಿಯಲಿದ್ದು,ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್‌ ಧನಕರ್‌ ಅದೇ ದಿನ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೊಹರಂ ಹಾಗೂ ರಕ್ಷಾ ಬಂಧನ ಪ್ರಯುಕ್ತ ಮಂಗಳವಾರ ಹಾಗೂ ಗುರುವಾರ ಸದನದಲ್ಲಿ ಕಲಾಪ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸದನದ ಎಲ್ಲ ಸದಸ್ಯರ ಪರವಾಗಿ ಸೋಮವಾರ ಸಂಜೆ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಮತ್ತೊಂದು ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಆ ವೇಳೆ ನಾಯ್ಡು ಅವರಿಗೆ ಪ್ರಧಾನಿ ಮೋದಿ ಸ್ಮರಣಿಕೆ ನೀಡಲಿದ್ದು, ರಾಜ್ಯಸಭೆಯ ಉಪಸಭಾಪತಿ ಅವರು ವಿದಾಯ ಭಾಷಣ ಮಾಡಲಿದ್ದಾರೆ ಎಂದೂ ಹೇಳಲಾಗಿದೆ.

ನಾಯ್ಡು ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಅವಧಿ ಕುರಿತ ವಿವರವಾದ ಮಾಹಿತಿ ನೀಡುವ ಪ್ರಕಟಣೆಯನ್ನು ಮೋದಿಯವರು ಬಿಡುಗಡೆ ಮಾಡಲಿದ್ದು, ಬಳಿಕ ಭೋಜನ ನಡೆಯಲಿದೆ.

ನೂತನ ಉಪರಾಷ್ಟ್ರಪತಿ ಧನಕರ್‌ ಅವರು ಭಾನುವಾರ ನಾಯ್ಡು ಅವರನ್ನು ಭೇಟಿಯಾಗಿದ್ದರು.

ನಾಯ್ಡು ಮತ್ತು ಅವರ ಪತ್ನಿ ಉಷಾ ನಾಯ್ಡು ಅವರು,ಧನಕರ್‌ ಮತ್ತು ಅವರ ಪತ್ನಿ ಸುದೇಶ್‌ ಅವರನ್ನುಉಪರಾಷ್ಟ್ರಪತಿ ನಿವಾಸದಲ್ಲಿ ಸ್ವಾಗತಿಸಿದ್ದರು. ಈ ವೇಳೆ ನಾಯ್ಡು ಅವರು ತಮ್ಮ 'ಅಂಗ ವಸ್ತ್ರ'ವನ್ನು ಧನಕರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಇಬ್ಬರೂ ಸುಮಾರು 30 ನಿಮಿಷ ಮಾತುಕತೆ ನಡೆಸಿದ್ದು, ಬಳಿಕ ಉಪರಾಷ್ಟ್ರಪತಿ ನಿವಾಸ ಮತ್ತು ಸಚಿವಾಲಯದ ಸುತ್ತಲೂ ಸುತ್ತಾಡಿದ್ದಾರೆ. ಇದೇ ವೇಳೆ ನಾಯ್ಡು ಅವರು ಸಚಿವಾಲಯದ ಸಿಬ್ಬಂದಿಯನ್ನುಧನಕರ್‌ಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.