ADVERTISEMENT

ರಾಜ್ಯಸಭೆ: ಎನ್‌ಡಿಎಗೆ ಬಹುಮತ

ಕುರಿಯನ್, ಬಿಟ್ಟೂ ಸೇರಿ 12 ಮಂದಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 0:28 IST
Last Updated 28 ಆಗಸ್ಟ್ 2024, 0:28 IST
<div class="paragraphs"><p>ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿಗಳಾದ ಉಪೇಂದ್ರ ಕುಶ್ವಾಹ ಮತ್ತು ಮನನ್‌ ಕುಮಾರ್‌ ಮಿಶ್ರಾ ಅವರೊಂದಿಗೆ ಸಂಭ್ರಮಿಸಿದರು </p></div>

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿಗಳಾದ ಉಪೇಂದ್ರ ಕುಶ್ವಾಹ ಮತ್ತು ಮನನ್‌ ಕುಮಾರ್‌ ಮಿಶ್ರಾ ಅವರೊಂದಿಗೆ ಸಂಭ್ರಮಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ರಾಜ್ಯಸಭೆಗೆ 12 ಸದಸ್ಯರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದು, ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ತನ್ನದಾಗಿಸಿಕೊಂಡಿದೆ.

ADVERTISEMENT

12 ಸ್ಥಾನಗಳಲ್ಲಿ ಎನ್‌ಡಿಎ 11 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬಿಜೆಪಿಯ 9 ಮಂದಿ ಸೇರಿದ್ದಾರೆ. ಮಿತ್ರ ಪಕ್ಷಗಳಾದ ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಮತ್ತು ರಾಷ್ಟ್ರೀಯ ಲೋಕ ಮಂಚ್‌ನ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನವನ್ನು ಕಾಂಗ್ರೆಸ್‌ ಪಕ್ಷ ತೆಲಂಗಾಣದಿಂದ ಗೆದ್ದುಕೊಂಡಿದೆ.

ಈ ಫಲಿತಾಂಶಕ್ಕೂ ಮುನ್ನ ನಾಮ ನಿರ್ದೇಶನಗೊಂಡ ಆರು ಸದಸ್ಯರು ಮತ್ತು ಹರಿಯಾಣದ ಒಬ್ಬ ಪಕ್ಷೇತರ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಸದಸ್ಯರ ಸಂಖ್ಯೆ 110 ಇತ್ತು. ಇದೀಗ ಅದು 121ಕ್ಕೆ ಏರಿಕೆಯಾಗಿದೆ. ರಾಜ್ಯಸಭೆಯಲ್ಲಿ ಹಾಲಿ 237 ಸದಸ್ಯರಿದ್ದಾರೆ. ಎಂಟು ಸ್ಥಾನಗಳು (ಜಮ್ಮು ಮತ್ತು ಕಾಶ್ಮೀರದಿಂದ 4, ನಾಮನಿರ್ದೇಶಿತ 4) ಖಾಲಿಯಿವೆ.

ನಾಮ ನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳನ್ನು ಸರ್ಕಾರ ಭರ್ತಿಗೊಳಿಸಿದರೆ ಎನ್‌ಡಿಎ ಸದಸ್ಯರ ಸಂಖ್ಯೆ 125ಕ್ಕೆ ಏರಿಕೆಯಾಗಲಿದೆ. ಸದನವು ತನ್ನ ಪೂರ್ಣ ಬಲವನ್ನು (245) ಪಡೆದಾಗ ಬಹುಮತಕ್ಕೆ 123 ಸ್ಥಾನಗಳು ಬೇಕು.

ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಸದಸ್ಯ. ಬಿಜೆಪಿಯಿಂದ ಗೆದ್ದವರಲ್ಲಿ ಕೇಂದ್ರ ಸಚಿವರಾದ ಜಾರ್ಜ್‌ ಕುರಿಯನ್‌ (ಮಧ್ಯಪ್ರದೇಶದಿಂದ) ಮತ್ತು ರವನೀತ್‌ ಸಿಂಗ್‌ ಬಿಟ್ಟೂ (ರಾಜಸ್ಥಾನದಿಂದ) ಸೇರಿದ್ದಾರೆ. ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಾಗ ಇಬ್ಬರೂ ಸಂಸದರಾಗಿರಲಿಲ್ಲ. 

ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ 27 ಸದಸ್ಯರನ್ನು ಹೊಂದಿದೆ. ಟಿಎಂಸಿಯು (13) ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಮೂರನೇ ಪಕ್ಷ ಎನಿಸಿದೆ.

ರಾಜ್ಯಸಭೆಯ 10 ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ, ಬಿಆರ್‌ಎಸ್‌ನ ಕೇಶವ ರಾವ್‌ ಹಾಗೂ ಬಿಜೆಡಿಯ ಮಮತಾ ಮೊಹಾಂತ ಅವರು ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ಮುನ್ನ ರಾಜೀನಾಮೆ ನೀಡಿದ್ದರಿಂದ 12 ಸ್ಥಾನಗಳು ತೆರವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.