ADVERTISEMENT

ಎಸ್‌ಪಿಜಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಸ್ತು

ಪರ–ವಿರೋಧ ಚರ್ಚೆಗಳ ನಡುವೆ ರಾಜ್ಯಸಭೆಯಲ್ಲಿ ಅಂಗೀಕಾರ

ಪಿಟಿಐ
Published 3 ಡಿಸೆಂಬರ್ 2019, 18:30 IST
Last Updated 3 ಡಿಸೆಂಬರ್ 2019, 18:30 IST
ಗೃಹಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದರು –ಪಿಟಿಐ ಚಿತ್ರ
ಗೃಹಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಪರ– ವಿರೋಧ ಚರ್ಚೆಗಳ ನಡುವೆ, ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ತಿದ್ದುಪಡಿ ಮಸೂದೆಯನ್ನು ಮಂಗಳವಾರ ರಾಜ್ಯಸಭೆ ಅಂಗೀಕರಿಸಿದೆ.

ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ವಿರೋಧಿಸುತ್ತಾ ಬಂದಿವೆ. ಅಲ್ಲದೆ, ನೆಹರೂ– ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆ ಯನ್ನು ತೆಗೆದುಹಾಕಿದ ಕ್ರಮವನ್ನು, ‘ರಾಜಕೀಯ ಪ್ರತೀಕಾರದ ಕ್ರಮ’ ಎಂದು ಟೀಕಿಸಿದ್ದವು.

ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಗೃಹಸಚಿವ ಅಮಿತ್‌ ಶಾ, ‘ಒಂದು ಪರಿವಾರ ಮಾತ್ರವಲ್ಲ, ದೇಶದ ಎಲ್ಲಾ 130 ಕೋಟಿ ಜನರ ಸುರಕ್ಷತೆಯ ಕಾಳಜಿ ಸರ್ಕಾರಕ್ಕೆ ಇದೆ. ಅಪಾಯದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಿದ ಬಳಿಕವೇ ಕೆಲವರ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದರು.

ADVERTISEMENT

‘ಪ್ರತೀಕಾರದ ಉದ್ದೇಶದಿಂದ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಕಾಂಗ್ರೆಸ್‌ ಹಿಂದೆ ಇಂಥ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್‌, ಐ.ಕೆ. ಗುಜ್ರಾಲ್‌, ಚಂದ್ರಶೇಖರ್‌, ಎಚ್‌.ಡಿ. ದೇವೇಗೌಡ ಹಾಗೂ ಇತ್ತೀಚೆಗೆ ಮನಮೋಹನ ಸಿಂಗ್‌ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದಾಗ ಯಾರೂ ಚರ್ಚಿಸಿಲ್ಲ. ಈಗ ಮಾತ್ರ ಯಾಕೆ ಇಷ್ಟೊಂದು ವಿರೋಧ ಬರುತ್ತಿದೆ? ಭದ್ರತೆಯನ್ನು ಪ್ರತಿಷ್ಠೆಯ ಸಂಕೇತವಾಗಿ ಪರಿಗಣಿಸಬಾರದು’ ಎಂದರು.

ಶಾ ಅವರ ಉತ್ತರದಿಂದ ತೃಪ್ತ ರಾಗದ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಆ ನಂತರ ಮಸೂದೆಗೆ ಅಂಗೀಕಾರದ ಮುದ್ರೆ ಒತ್ತಲಾಯಿತು.

ಪ್ರಧಾನಿಗೆ ಮಾತ್ರ ಭದ್ರತೆ: ತಿದ್ದು ಪಡಿಯಾದ ಕಾಯ್ದೆಯ ಪ್ರಕಾರ ಇನ್ನು ಮುಂದೆ ಪ್ರಧಾನಿ ಮತ್ತು ಅವರ ಅಧಿಕೃತ ನಿವಾಸದಲ್ಲಿ ಅವರ ಜೊತೆಗೆ ವಾಸಿಸುವ ಅವರ ಕುಟುಂಬದವರಿಗೆ ಎಸ್‌ಪಿಜಿ ಭದ್ರತೆ ಲಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.