ನವದೆಹಲಿ: ‘ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳ ವ್ಯವಹಾರ ಸುಲಭಗೊಳಿಸುವ, ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಂಬಂಧ ಹಾಲಿ ಇರುವ ಹಳೆಯದಾದ ಕಠಿಣ ನಿಯಮಗಳನ್ನು ತೆಗೆದುಹಾಕುವ ’ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ–2023 ಅನ್ನು ರಾಜ್ಯಸಭೆ ಗುರುವಾರ ಧ್ವನಿ ಮತದಿಂದ ಅಂಗೀಕರಿಸಿದೆ.
ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ‘ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳ ವ್ಯವಹಾರವನ್ನು ಸುಗಮಗೊಳಿಸಲು ಈ ಮಸೂದೆ ತರಲಾಗಿದೆ. ನೌಕರಶಾಹಿಯ ಹೊರೆಯು ಕಡಿಮೆಯಾಗಲಿದೆ’ ಎಂದು ಹೇಳಿದರು.
‘ಭಯೋತ್ಪಾದಕ ಚಟುವಟಿಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪತ್ರಿಕೆ ಅಥವಾ ನಿಯತಕಾಲಿಕವನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ’ ಎಂದು ಅವರು ತಿಳಿಸಿದರು.
ಈ ಮಸೂದೆಯು ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಬುಕ್ಸ್ (ಪಿಆರ್‌ಬಿ) ಕಾಯ್ದೆ–1867 ಅನ್ನು ಬದಲಿಸಲಿದೆ.
ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಮತ್ತು ಜೈಲುವಾಸದ ನಿಬಂಧನೆಯನ್ನು ಬಿಟ್ಟು ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸುವ ಈ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.