ಮುಂಬೈ/ಚಂಡೀಗಢ: ಮತದಾನದ ನಿಯಮ ಉಲ್ಲಂಘನೆಯಾಗಿರುವುದಾಗಿ ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಅಘಾಡಿಯ ಸಚಿವ ಜಿತೇಂದ್ರ ಆವ್ಹಾಡ್ (ಎನ್‌ಸಿಪಿ), ಯಶೋಮತಿ ಠಾಕೂರ್ (ಕಾಂಗ್ರೆಸ್) ಹಾಗೂ ಶಿವ ಸೇನೆಯ ಶಾಸಕ ಸುಹಾಸ್ ಕಾಂಡೆ ಮತದಾನಕ್ಕೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ.
'ಅವರ ಮತಗಳನ್ನು ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ' ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಪಕ್ಷದ ಏಜೆಂಟರಿಗೆ ಮತಪತ್ರ ತೋರಿಸುವ ಬದಲು ಆವ್ಹಾಡ್ ಮತ್ತು ಠಾಕೂರ್ ತಮ್ಮ ಮತಪತ್ರಗಳನ್ನು ಏಜೆಂಟರ ಕೈಗೆ ಕೊಟ್ಟಿರುವುದಾಗಿ ಬಿಜೆಪಿ ಆರೋಪಿಸಿದೆ. ಕಾಂಡೆ ಅವರು ಇಬ್ಬರು ಏಜೆಂಟರಿಗೆ ಮತಪತ್ರವನ್ನು ತೋರಿಸಿರುವುದಾಗಿ ಆರೋಪ ಮಾಡಲಾಗಿದೆ.
ಇಂಥದ್ದೇ ಕಾರಣದಿಂದಾಗಿ ಹರಿಯಾಣದಲ್ಲೂ ಮತ ಎಣಿಕೆ ನಿಲ್ಲಿಸಲಾಗಿದೆ. ಕಾಂಗ್ರೆಸ್ ಶಾಸಕರ ಮತಗಳನ್ನು ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕೋರಲಾಗಿದೆ.
ಶಾಸಕರಾದ ಕಿರಣ್ ಚೌಧರಿ ಮತ್ತು ಬಿ.ಬಿ.ಬಾತ್ರಾ ಅವರು ಮತಪತ್ರಗಳನ್ನು ಅನಧಿಕೃತ ವ್ಯಕ್ತಿಗಳಿಗೆ ತೋರಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿರುವುದಾಗಿ ಆರೋಪಿಸಲಾಗಿದೆ. ದೂರಿನ ಅನ್ವಯ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ.
'ಮತ ಎಣಿಕೆ ಆರಂಭಿಸಲು ಚುನಾವಣಾ ಆಯೋಗದಿಂದ ಅನುಮತಿ ಸಿಗಬೇಕಿದೆ. ಅನುಮತಿ ಕೋರಿ ಆಯೋಗಕ್ಕೆ ಅಧಿಕಾರಿಗಳು ಇಮೇಲ್ ರವಾನಿಸಿದ್ದಾರೆ' ಎಂದು ಶಿವಸೇನೆಯ ಸಚಿವ ಏಕಾಂತ ಶಿಂದೆ ತಿಳಿಸಿದ್ದಾರೆ.
ರಾಜ್ಯಸಭೆಯ ಒಟ್ಟು 16 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿದೆ. ಮಹಾರಾಷ್ಟ್ರದಿಂದ ಆರು, ಕರ್ನಾಟಕ ಮತ್ತು ರಾಜಸ್ಥಾನದಿಂದ ತಲಾ ನಾಲ್ಕು ಹಾಗೂ ಹರಿಯಾಣದಿಂದ ಎರಡು ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.