ಲಖನೌ: ರೈತರ ಅಭಿವೃದ್ಧಿ ಬಗ್ಗೆ ಮಾತನಾಡುವವರಿಗೆ ಮಾತ್ರ ಉತ್ತರ ಪ್ರದೇಶದ ಮತದಾರರು ಮತ ಹಾಕಲಿದ್ದಾರೆ. ಧಾರ್ಮಿಕ ಧ್ರುವೀಕರಣದಲ್ಲಿ ತೊಡಗಿರುವವರಿಗೆ ಅದರಿಂದ ಯಾವುದೇ ಪ್ರಯೋಜನ ಆಗದು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈತರ ಉತ್ಪನ್ನಗಳಿಗೆ ಅತ್ಯಂತ ಕಡಿಮೆ ಬೆಲೆ ಸಿಗುತ್ತಿದೆ. ಆದರೆ, ವಿದ್ಯುತ್ ಶುಲ್ಕವಾಗಿ ಭಾರಿ ಮೊತ್ತ ಪಾವತಿಸಬೇಕಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
‘ರೈತರು, ನಿರುದ್ಯೋಗಿ ಯುವ ಜನರು ಮತ್ತು ಮಧ್ಯಮ ವರ್ಗವನ್ನು ಬಾಧಿಸುತ್ತಿರುವ ಹಣದುಬ್ಬರವೇ ಚುನಾವಣೆಯ ವಿಷಯ. ಜಿನ್ನಾ ಮತ್ತು ಪಾಕಿಸ್ತಾನದ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ–ಮುಸ್ಲಿಂ ಧ್ರುವೀಕರಣದ ಪ್ರಯತ್ನ ನಡೆಯುತ್ತಿದೆ. ಆದರೆ, ಧ್ರುವೀಕರಣದ ಯತ್ನ ನಡೆಸುತ್ತಿರುವವರಿಗೆ ಅದರ ಲಾಭ ದೊರೆಯದು’ ಎಂದು ಟಿಕಾಯತ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಧ್ರುವೀಕರಣ ನಡೆಸುತ್ತಿರುವ ಪಕ್ಷ ಅಥವಾ ವ್ಯಕ್ತಿಯ ಹೆಸರನ್ನು ಅವರು ಹೇಳಿಲ್ಲ.
ಸಮಾಜವಾದಿ ಪಕ್ಷ ಮತ್ತು ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪಾಕಿಸ್ತಾನದ ಬೆಂಬಲಿಗರು ಮತ್ತು ಜಿನ್ನಾ ಆರಾಧಕರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಟೀಕಿಸಿದ್ದರು. ಪಾಕಿಸ್ತಾನ ಮತ್ತು ಅದರ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಬಗ್ಗೆ ಅಖಿಲೇಶ್ ನೀಡಿದ್ದ ಹೇಳಿಕೆಯನ್ನು ಇರಿಸಿಕೊಂಡು ಯೋಗಿ ಅವರು ವಾಗ್ದಾಳಿ ನಡೆಸಿದ್ದರು.
ಬಿಜೆಪಿಯ ವಿರುದ್ಧ ಪ್ರಚಾರ ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಒಂದು ವರ್ಷ ನಡೆದ ಪ್ರತಿಭಟನೆಯ ಮುಂಚೂಣಿಯಲ್ಲಿ ಟಿಕಾಯತ್ ಇದ್ದರು.
‘ನಾನು ರಾಜಕಾರಣಿ ಅಲ್ಲ. ರಾಜಕಾರಣದಿಂದ ದೂರವೇ ಇರುತ್ತೇನೆ. ನಾನು ರೈತರ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾಯಕರನ್ನು ಪ್ರಶ್ನಿಸಿ ಎಂದು ಜನರನ್ನು ಕೋರುತ್ತಿದ್ದೇನೆ. ರೈತರ ವಿಷಯಗಳ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಭವಿಷ್ಯ ನುಡಿಯಲು ಅವರು ನಿರಾಕರಿಸಿದ್ದಾರೆ. ಈಗಿನ ಸರ್ಕಾರದ ಬಗ್ಗೆ ರೈತರಲ್ಲಿ ಒಳ್ಳೆಯ ಭಾವನೆ ಇಲ್ಲ. ಅದು ಫಲಿತಾಂಶದಲ್ಲಿ ಕಾಣಿಸಲಿದೆ ಎಂದಷ್ಟೇ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಚಟುವಟಿಕೆಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಏಕೆಂದರೆ, ಈ ಅಧಿಕಾರಿಗಳು ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಅನುಕೂಲಕರವಾಗಿ ನಡೆದುಕೊಳ್ಳಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
***
ಕೋಮು ಧ್ರುವೀಕರಣ ಮಾಡದವರಿಗೆ, ಪಾಕಿಸ್ತಾನ ಮತ್ತು ಜಿನ್ನಾ ಬಗ್ಗೆ ಮಾತನಾಡದೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವರಿಗೆ ಜನರು ಮತ ಹಾಕುತ್ತಾರೆ ಎಂಬುದು ನನ್ನ ಭಾವನೆ
- ರಾಕೇಶ್ ಟಿಕಾಯತ್, ರೈತರ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.