ನೋಯ್ಡಾ: ರಕ್ಷಾ ಬಂಧನ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಇತರರಿಗೆ ರಾಖಿಗಳನ್ನು ಕಳುಹಿಸಿರುವುದಾಗಿ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನ ಪ್ರಜೆ ಸೀಮಾ ಹೈದರ್ ಮಂಗಳವಾರ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ರಾಖಿಗಳನ್ನು ಕಳುಸಿರುವುದಾಗಿ ಸೀಮಾ ಹೇಳಿದ್ದಾರೆ.
ಸಹೋದರ–ಸಹೋದರಿಯರ ನಡುವಿನ ಬಾಂಧವ್ಯ ಸಾರುವ ರಕ್ಷಾ ಬಂಧನವನ್ನು ದೇಶದಾದ್ಯಂತ ಆಗಸ್ಟ್ 30ರಂದು ಆಚರಿಸಲಾಗುತ್ತದೆ.
ಸೀಮಾ ಅವರದ್ದು ಎನ್ನಲಾದ ವಿಡಿಯೊಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ದೇಶದ ಜವಾಬ್ದಾರಿ ಹೊತ್ತಿರುವ ನನ್ನ ಈ ಸಹೋದರರಿಗೆ ರಕ್ಷಾ ಬಂಧನ ದಿನದಂದೇ ತಲುಪಲಿ ಎಂಬ ಉದ್ದೇಶದಿಂದ ಈ ರಾಖಿಗಳನ್ನು ಮುಂಚಿತವಾಗಿಯೇ ಕಳುಹಿಸಿದ್ದೇನೆ. ನನಗೆ ಖುಷಿಯಾಗಿದೆ. ಜೈ ಶ್ರೀರಾಮ್, ಜೈ ಹಿಂದ್, ಹಿಂದೂಸ್ತಾನ್ ಜಿಂದಾಬಾದ್’ ಎಂದು ಸೀಮಾ ಅವರು ಹೇಳಿರುವುದು ಈ ವಿಡಿಯೊದಲ್ಲಿದೆ.
ವಿಡಿಯೊದ ಮತ್ತೊಂದು ತುಣುಕಲ್ಲಿ, ಸೀಮಾ ತನ್ನ ಮಕ್ಕಳೊಂದಿಗೆ ಈ ರಾಖಿಗಳನ್ನು ಪೊಟ್ಟಣಗಳಲ್ಲಿ ಹಾಕುತ್ತಿರುವುದು, ಹಿನ್ನೆಲೆಯಲ್ಲಿ ‘ಭೈಯಾ ಮೇರೆ ರಾಖಿ ಕೆ ಬಂಧನ್ ಕೊ ನಿಭಾನಾ’ ಎಂಬ ಹಾಡು ಕೇಳುತ್ತದೆ.
ಆನ್‌ಲೈನ್ ಆಟ ಪಬ್‌ಜಿ ಮೂಲಕ ಪರಿಚಯವಾಗಿರುವ, ಗ್ರೇಟರ್ ನೋಯ್ಡಾದಲ್ಲಿರುವ ಪ್ರಿಯತಮ ಸಚಿನ್ ಮೀನಾ ಅವರೊಂದಿಗೆ ಜೀವನ ಸಾಗಿಸುವ ಉದ್ದೇಶದೊಂದಿಗೆ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೀಮಾ ಅವರು ನೇಪಾಳ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ತಮ್ಮೊಂದಿಗೆ ನಾಲ್ವರು ಮಕ್ಕಳನ್ನು ಕೂಡ ಕರೆತಂದಿದ್ದಾರೆ.
ಸೀಮಾ ಅವರನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯ ಅವರಿಗೆ ಜುಲೈ 7ರಂದು ಜಾಮೀನು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.