ADVERTISEMENT

ರಾಮಮಂದಿರ: ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ರಾಮ ಜನ್ಮಭೂಮಿ ಮಣ್ಣು ಉಡುಗೊರೆ

ಪಿಟಿಐ
Published 13 ಜನವರಿ 2024, 15:31 IST
Last Updated 13 ಜನವರಿ 2024, 15:31 IST
<div class="paragraphs"><p>ಅಯೋಧ್ಯೆ ರಾಮಮಂದಿರ</p></div>

ಅಯೋಧ್ಯೆ ರಾಮಮಂದಿರ

   

ಅಯೋಧ್ಯೆ: ರಾಮ ಮಂದಿರಕ್ಕೆ ಅಡಿಪಾಯ ಹಾಕುವ ವೇಳೆ ಅಗೆದಿದ್ದ ಮಣ್ಣನ್ನು ಪೊಟ್ಟಣಗಳಲ್ಲಿ ತುಂಬಿಸಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಾಜರಾಗುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ರಾಮ ಜನ್ಮಭೂಮಿಯ ತೀರ್ಥ ಕ್ಷೇತ್ರ ಟ್ರಸ್ಟ್‌ ಶುಕ್ರವಾರ ತಿಳಿಸಿದೆ.

ಎರಡು ಪೊಟ್ಟಣಗಳಲ್ಲಿ ಉಡುಗೊರೆಗಳನ್ನು ನೀಡಲಾಗುವುದು. ಒಂದರಲ್ಲಿ ಮಣ್ಣು ಇದ್ದರೆ, ಮತ್ತೊಂದರಲ್ಲಿ ದೇಸಿ ತುಪ್ಪದಿಂದ ತಯಾರಿಸಲಾದ ವಿಶೇಷ ಮೋತಿಚೂರ್‌ ಲಡ್ಡು, ಪವಿತ್ರ ತುಳಸಿ ದಳ ಇರಿಸಲಾಗುವುದು. ಸರಯೂ ನದಿಯ ನೀರು ಮತ್ತು ಗೋರಖಪುರದ ಗೀತಾ ಪ್ರೆಸ್‌ ಮುದ್ರಿಸಿರುವ ಧಾರ್ಮಿಕ ಪುಸ್ತಗಳೂ ಉಡುಗೊರೆ ಪೆಟ್ಟಿಗೆಯಲ್ಲಿ ಇರಲಿವೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆ ರಾಮ ಮಂದಿರದ 15 ಅಡಿ ಎತ್ತರದ ಚಿತ್ರವನ್ನು  ಚೀಲದಲ್ಲಿ ಇರಿಸಿ ನೀಡಲಾಗುವುದು. ಅದರಲ್ಲಿ ಮಂದಿರದ ಇತರ ಚಿತ್ರಗಳೂ ಇರಲಿವೆ.

11,000ಕ್ಕೂ ಹೆಚ್ಚು ಅತಿಥಿಗಳಿಗೆ ನೆನಪಿನಲ್ಲಿ ಉಳಿಯುವಂಥ ಉಡುಗೊರೆಗಳನ್ನು ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆಮಂತ್ರಿತ ಗಣ್ಯ ವ್ಯಕ್ತಿಗಳು ಮತ್ತು ಅತಿಥಿಗಳಿಗೆ ಸ್ವಾಗತ ಕೋರಲು ಟ್ರಸ್ಟ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಸೆವೆನ್‌ ಸ್ಟಾರ್‌ ವೆಜ್‌ ಹೋಟೆಲ್‌ 

ಕೇವಲ ಸಸ್ಯಾಹಾರ ಒದಗಿಸುವ ಜಗತ್ತಿನ ಪ್ರಥಮ ಸೆವೆನ್‌ ಸ್ಟಾರ್‌ ಹೋಟೆಲ್‌ ಅನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ಹೋಟೆಲ್‌ ನಿರ್ಮಿಸಲು 25 ಪ್ರಸ್ತಾವನೆಗಳು ಬಂದಿವೆ. ಅದರಲ್ಲಿ ಸೆವೆನ್‌ ಸ್ಟಾರ್‌ ಹೋಟೆಲ್‌ ನಿರ್ಮಿಸುವ ಪ್ರಸ್ತಾವನೆಯೂ ಸೇರಿದೆ ಎಂದರು.ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ವಾರ್ಷಿಕೋತ್ಸವ ಆಚರಿಸುವ ನಿಟ್ಟಿನಲ್ಲಿ ಪ್ರತಿವರ್ಷ ಜನವರಿ 22ರಂದು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪ್ರಮುಖ ಅಂಶಗಳು

  • ರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಅವುಗಳ ಸುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾನುವಾರ ಚಾಲನೆ ನೀಡಲಿದ್ದಾರೆ.

  • ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವ ನಿಟ್ಟಿನಲ್ಲಿ ರಾಮ ಮಂದಿರದ ಆವರಣ ಸೇರಿ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ದೂರದರ್ಶನವು ಸುಮಾರು 40 ಕ್ಯಾಮೆರಾಗಳನ್ನು ಅಳವಡಿಸಲಿದೆ. 

ರಾಮ ಜನ್ಮಭೂಮಿ ಹೋರಾಟವು ಸುಳ್ಳು ಜಾತ್ಯತೀತ ವಾದವನ್ನು ತೊಡೆದುಹಾಕಿ ಜಾತ್ಯತೀತತೆಯ ನಿಜವಾದ ಅರ್ಥವನ್ನು ಮರುಸ್ಥಾಪಿಸಿದ್ದರ ಸಂಕೇತವಾಗಿದೆ.
ಎಲ್‌.ಕೆ. ಅಡ್ವಾಣಿ, ಬಿಜೆಪಿ ಹಿರಿಯ ನಾಯಕ
ರಾಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ.
ಮಾಯಾವತಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ
ಮಹಾರಾಷ್ಟ್ರದ ಉಜ್ಜೈನ್‌ನಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಕೈಗೊಂಡಿರುವ ಪಾದಯಾತ್ರೆಯು ಶನಿವಾರ ಲಖನೌ ತಲುಪಿತು. ಈ ವೇಳೆ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡರು  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.