ನಾಗ್ಪುರ: ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ರವೀಂದ್ರ ನರೈನ್ ಸಿಂಗ್ ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಧಂತೋಲಿ ಎಂಬಲ್ಲಿ ವಿಶ್ವ ಹಿಂದೂ ಜನಕಲ್ಯಾಣ ಪರಿಷತ್‌ನ ವಿದರ್ಭ ಪ್ರಾದೇಶಿಕ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲೆಂದು ಸಿಂಗ್ ಭಾನುವಾರ ನಾಗ್ಪುರಕ್ಕೆ ಆಗಮಿಸಿದ್ದರು.
‘ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ (ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಕಚೇರಿ) ಮತ್ತು ಮೆಕ್ಕಾ (ಇಸ್ಲಾಂನ ಪವಿತ್ರ ನಗರ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಹಿಂದುತ್ವದ ಸಂಕೇತವಾಗಲಿದೆ’ ಎಂದು ಸಿಂಗ್ ಹೇಳಿದರು. ಸಂಘಟನೆಯ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಮತಾಂತರದ ಗುರಿಯನ್ನು ಹೊಂದಿರುವ ಸಂಘಟನೆಗಳಿಗೆ ಪೂರೈಕೆಯಾಗುತ್ತಿರುವ ವಿದೇಶಿ ದೇಣಿಗೆಗೆ ನರೇಂದ್ರ ಮೋದಿ ಸರ್ಕಾರವು ಕಡಿವಾಣ ಹಾಕಿದೆ ಎಂದು ರವೀಂದ್ರ ನರೈನ್ ಸಿಂಗ್ ಕೊಂಡಾಡಿದರು. ಅಲ್ಲದೆ, ರಾಷ್ಟ್ರ ನಿರ್ಮಾಣದಲ್ಲಿ ಹಿಂದೂಗಳೊಂದಿಗೆ ಕೈಜೋಡಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದರು.
‘ತಮಗೆ ಏನೂ ಆಗದು ಎಂದು ಹಿಂದೂಗಳು ಭಾವಿಸುತ್ತಾರೆ. ಈ ಮನಸ್ಥಿತಿಯಿಂದಾಗಿ ನಾವು ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ’ ಎಂದು ಸಿಂಗ್ ಹೇಳಿದರು. ಕ್ರಿಶ್ಚಿಯನ್ ಮಿಷನರಿಗಳು ಧಾರ್ಮಿಕ ಮತಾಂತರಕ್ಕಾಗಿ ಬುಡಕಟ್ಟು ಪ್ರದೇಶಗಳಲ್ಲಿ ಆಸ್ಪತ್ರೆ ಮತ್ತು ಶಾಲೆಗಳನ್ನು ನಡೆಸುತ್ತಿವೆ,’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.