ಲಖನೌ: ವೇದಘೋಷಗಳ ನಡುವೆ ರಾಮಮಂದಿರದ ಗರ್ಭಗುಡಿಯ ಪೀಠದ ಮೇಲೆ ರಾಮಲಲ್ಲಾ ವಿಗ್ರಹವನ್ನು ಗುರುವಾರ ವಿರಾಜಮಾನ ಮಾಡಲಾಯಿತು.
ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಪೂರ್ವಭಾವಿ ಆಚರಣೆಗಳ ಭಾಗವಾಗಿ ವಿಗ್ರಹವನ್ನು ವಿರಾಜಮಾನ ಮಾಡಲಾಯಿತು.
ಇದಕ್ಕೂ ಮೊದಲು, ದೇಶದ ನದಿಗಳ ನೀರಿನಿಂದ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಲಾಯಿತು. ಜೊತೆಗೆ, ಔಷಧೀಯ ಗುಣಗಳಿರುವ ಸಸ್ಯಗಳನ್ನು ನೆನೆಸಿರುವ ನೀರಿನಿಂದ ವಿಗ್ರಹವನ್ನು ಸ್ವಚ್ಛಗೊಳಿಸಲಾಯಿತು ಎಂದು ಮಂದಿರದ ಅರ್ಚಕರೊಬ್ಬರು ತಿಳಿಸಿದರು.
ಗುರುವಾರ ಬೆಳಿಗ್ಗೆಯೇ ರಾಮಮಂದಿರದ ಗರ್ಭಗುಡಿಯಲ್ಲಿ ‘ಗಣೇಶ ಪೂಜೆ’ ಮತ್ತು ‘ವರುಣ ಪೂಜೆ’ಯನ್ನೂ ನೆರವೇರಿಸಲಾಯಿತು. 150 ಕೆ.ಜಿ ತೂಕದ ಬಾಲರಾಮನ ವಿಗ್ರಹವನ್ನು ಟ್ರಕ್ ಮೂಲಕ ಬುಧವಾರ ರಾತ್ರಿಯೇ ಗರ್ಭಗುಡಿಗೆ ತರಲಾಗಿತ್ತು.
ಇದಲ್ಲದೇ, ಪೂರ್ವಭಾವಿ ವಿಧಿವಿಧಾನಗಳ ಭಾಗವಾಗಿ, ಪ್ರಮುಖ ತೀರ್ಥಕ್ಷೇತ್ರಗಳನ್ನು ಆರಾಧಿಸುವ ‘ತೀರ್ಥ ಪೂಜೆ’ಯನ್ನು ಅರ್ಚಕರು ನೆರವೇರಿಸಿದರು.
21ರಂದೇ ಮೋದಿ ಅಯೋಧ್ಯೆಗೆ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ಮುಖ್ಯ ಯಜಮಾನ’ರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಭಾನುವಾರವೇ ಅಯೋಧ್ಯೆಯನ್ನು ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ 12:30ರಿಂದ ಪ್ರಾಣ ಪ್ರತಿಷ್ಠಾಪನೆಯ ವಿಧಿಗಳು ಆರಂಭವಾಗಲಿವೆ. ಈಚಿನ ದಿನಗಳಲ್ಲಿ ನಸುಕಿನ ಜಾವ ದಟ್ಟ ಮಂಜು ಆವರಿಸುತ್ತಿದೆ. ಇದರಿಂದಾಗಿ ಮೋದಿ ಅವರ ವಿಮಾನವು ಸೋಮವಾರ ನಿಗದಿತ ಸಮಯದಲ್ಲಿ ಅಯೋಧ್ಯೆ ತಲುಪುವುದಕ್ಕೆ ಸಮಸ್ಯೆಯಾಗುವ ಸಂಭವ ಇರುವುದರಿಂದ ಅವರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಮೋದಿ ಅವರು ಸರಯೂ ನದಿಯಲ್ಲಿ ಪವಿತ್ರಸ್ನಾನ ಮಾಡಿ, ನದಿ ನೀರನ್ನು ಹತ್ತಿರದ ನಾಗೇಶ್ವರ ಮಹಾದೇವ ದೇವಾಲಯಕ್ಕೆ ತಂದು ಜಲಾಭಿಷೇಕ ಮಾಡುವ ಸಾಧ್ಯತೆ ಇದೆ. ಅವರು ಸೀತೆಯ ಕುಲದೇವಿ ‘ದೇವಕಲಿ’ ಮಂದಿರ ಮತ್ತು ಹನುಮಾನ್ ಗಡಿ ಮಂದಿರಕ್ಕೂ ಭೇಟಿ ನೀಡಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಗಳು ತಿಳಿಸಿವೆ.
ರಾಮಲಲ್ಲಾ ವಿಗ್ರಹಕ್ಕೆ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಪ್ರಾಣ ಪ್ರತಿಷ್ಠಾಪನೆ ದಿನದಂದು ಮೋದಿ ಅವರ ಎದುರೇ ತೆರೆಯಲಾಗುತ್ತದೆ. ವಿಗ್ರಹದ ಕಣ್ಣಿಗೆ ಕಾಡಿಗೆಯನ್ನು ಮೋದಿ ಅವರೇ ಹಚ್ಚಿ, ಕನ್ನಡಿ ತೋರಲಿದ್ದಾರೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.