ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವ ಅರ್ಹತೆಯೇ ಕಾಂಗ್ರೆಸ್‌ಗೆ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ರಾಮ ಮಂದಿರದಲ್ಲಿ ಇದೇ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿತ್ತು. ಈ ಕುರಿತು ಶರ್ಮಾ ಅವರು ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದ ವಿಎಚ್‌ಪಿ, ಕಾಂಗ್ರೆಸ್‌ಗೆ ತನ್ನ ಪಾಪವನ್ನು ಕಡಿಮೆ ಮಾಡಿಕೊಳ್ಳುವ ಸುವರ್ಣಾವಕಾಶ ಕಲ್ಪಿಸಿತ್ತು. ಆದರೆ ನನ್ನ ಪ್ರಕಾರ, ರಾಮ ಮಂದಿರದ ವಿಚಾರದಲ್ಲಿ ಆರಂಭದಿಂದಲೂ ನಕಾರಾತ್ಮಕ ಧೋರಣೆ ಹೊಂದಿರುವ ಕಾಂಗ್ರೆಸ್‌ಗೆ ಅಂತಹ ಆಹ್ವಾನ ಸ್ವೀಕರಿಸುವ ಅರ್ಹತೆಯೇ ಇಲ್ಲ' ಎಂದು ಕುಟುಕಿದ್ದಾರೆ.
'ಆಹ್ವಾನವನ್ನು ಒಪ್ಪಿಕೊಳ್ಳುವ ಮೂಲಕ ಅವರು, ಸಾಂಕೇತಿಕವಾಗಿಯಾದರೂ ಹಿಂದೂ ಸಮಾಜದ ಕ್ಷಮೆ ಕೋರಬಹುದಾಗಿತ್ತು. ಆದರೆ, ಪಂಡಿತ್ ನೆಹರೂ (ಜವಾಹರಲಾಲ್ ನೆಹರೂ) ಅವರು ಸೋಮನಾಥ ದೇವಾಲಯದ ವಿಚಾರದಲ್ಲಿ ಹೇಗೆ ನಡೆದುಕೊಂಡರೋ, ಅದೇ ವರ್ತನೆಯನ್ನು ಕಾಂಗ್ರೆಸ್ ನಾಯಕತ್ವವು ರಾಮ ಮಂದಿರದ ವಿಚಾರದಲ್ಲಿ ಪುನರಾವರ್ತಿಸಿದೆ. ಅವರನ್ನು ಹಿಂದೂ ವಿರೋಧಿಗಳು ಎಂದು ಪರಿಗಣಿಸುವ ಇತಿಹಾಸ ಮುಂದುವರಿಯಲಿದೆ' ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.