ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ 'ಗರ್ಭಗುಡಿ' ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಭಾಗಿಯಾದರು.
ಕೆತ್ತನೆ ಮಾಡಿರುವ ಶಿಲೆಗೆ ಪೂಜೆ ನೆರವೇರಿಸುವ ಮೂಲಕ ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಗರ್ಭಗುಡಿ ನಿರ್ಮಾಣದಲ್ಲಿ ರಾಜಸ್ಥಾನದ ಮಕರಾನಾ ಬೆಟ್ಟದ ಅಮೃತಶಿಲೆಯನ್ನು ಬಳಸುವುದಾಗಿ ರಾಮ ಜನ್ಮಭೂಮಿ ಟ್ರಸ್ಟ್ ಕಳೆದ ವಾರ ಪ್ರಕಟಣೆಯಲ್ಲಿ ತಿಳಿಸಿತ್ತು.
ಎಂಟರಿಂದ ಒಂಭತ್ತು ಘನ ಅಡಿಗಳಷ್ಟು ಕೆತ್ತನೆ ಮಾಡಲಾದ ಮರಳುಗಲ್ಲು, 6.37 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, 4.70 ಲಕ್ಷ ಘನ ಅಡಿಗಳಷ್ಟು ನಸುಗೆಂಪು ಬಣ್ಣದ ಮರಳುಗಲ್ಲುಗಳನ್ನು ದೇವಾಲಯದ ನಿರ್ಮಾಣದಲ್ಲಿ ಹಾಗೂ ಗರ್ಭಗುಡಿಗಾಗಿ 13,300 ಘನ ಅಡಿಗಳಷ್ಟು ಬಿಳಿಯ ಮಕರಾನಾ ಅಮೃತಶಿಲೆಯನ್ನು ಬಳಸುವುದಾಗಿ ಹೇಳಿದೆ.
'ರಾಮ ಮಂದಿರವು ಭಾರತದ ರಾಷ್ಟ್ರೀಯ ದೇಗುಲವಾಗಲಿದೆ. ಈ ದಿನಕ್ಕಾಗಿ ಜನರು ಸುದೀರ್ಘ ಸಮಯದಿಂದ ಕಾದಿದ್ದರು. ರಾಮ ಮಂದಿರವು ಭಾರತದ ಏಕತೆಯ ಸಂಕೇತವಾಗಲಿದೆ' ಎಂದು ಯೋಗಿ ಆದಿತ್ಯನಾಥ್ ಹೇಳಿದರು.
2020ರ ಆಗಸ್ಟ್‌ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಮಂದಿರ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ರಾಮ ಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಎಂಜಿನಿಯರ್‌ಗಳಿಗೆ 'ಅಂಗ ವಸ್ತ್ರ' ನೀಡುವ ಮೂಲಕ ಯೋಗಿ ಆದಿತ್ಯನಾಥ್ ಅವರು ಸನ್ಮಾನಿಸಿದರು.
ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ 'ಶ್ರೀ ರಾಮಲಲಾ ಸದನವನ್ನು' ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಅಯೋಧ್ಯೆ ತಲುಪಿದ ಆದಿತ್ಯನಾಥ್ ಅವರು ಹನುಮಾನ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮೂರು ಹಂತಗಳಲ್ಲಿ ಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, 2023ಕ್ಕೆ ಗರ್ಭಗುಡಿಯ ಕಾರ್ಯಪೂರ್ಣಗೊಳ್ಳಲಿದೆ. ಮಂದಿರದ ನಿರ್ಮಾಣವು 2024ಕ್ಕೆ ಕೊನೆಯಾಗಲಿದ್ದು, ದೇವಾಲಯದ ಆವರಣದ ಕಾರ್ಯಗಳು 2025ಕ್ಕೆ ಪೂರ್ಣವಾಗಲಿದೆ ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಈಗ ಮಸೀದಿ ಸ್ಥಳದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದ್ದು, ಪ್ರಸ್ತುತ ಕಾಶಿ ವಿಶ್ವನಾಥ ಮಂದಿರದ ಸಮೀಪವಿರುವ ಜ್ಞಾನವಾಪಿ ಮಸೀದಿ, ಮಥುರಾದ ಕೃಷ್ಣ ಜನ್ಮಭೂಮಿ ಸಮೀಪದ ಶಾಹಿ ಈದ್ಗಾ ಮಸೀದಿಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.