ADVERTISEMENT

ಬಾಯಿ ಸಿಹಿ ಮಾಡಿದ 1.25 ಲಕ್ಷ ಉಂಡೆಗಳು: ಲಾಡುಗಳಿಗೆ ಬೆಂಗಳೂರಿನ ತುಪ್ಪ!

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 19:16 IST
Last Updated 5 ಆಗಸ್ಟ್ 2020, 19:16 IST
ರಘುಪತಿ ಲಾಡು
ರಘುಪತಿ ಲಾಡು   
""

ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆಯಲ್ಲಿ ಭಾಗವಹಿಸಿದ್ದ ಗಣ್ಯರು, ಸಾಧು, ಸಂತರು ಮತ್ತು ಆಹ್ವಾನಿತರ ಬಾಯಿ ಸಿಹಿ ಮಾಡಿದ ‘ರಘುಪತಿ ಲಾಡು’ಗಳಿಗೆ ಬೆಂಗಳೂರಿನ ಶುದ್ಧ ತುಪ್ಪ ಬಳಸಲಾಗಿದೆ.

ಬೆಂಗಳೂರಿನಿಂದ ತರಿಸಿಕೊಂಡ ಹಸುವಿನ ಶುದ್ಧ ತುಪ್ಪದಿಂದಾಗಿಯೇ ಲಾಡುಗಳು ಅತ್ಯಂತ ಮೃದು ಮತ್ತು ರುಚಿಕರವಾಗಿವೆ. ಶುದ್ಧ ತುಪ್ಪದ ಘಮ, ಘಮ ವಾಸನೆ ಬಾಯಲ್ಲಿ ನೀರೂರಿಸುತ್ತದೆ. ಆಸ್ಟ್ರೇಲಿಯಾದಿಂದ ವಿಶೇಷ ಕಡಲೆ ಹಿಟ್ಟು ತರಿಸಿಕೊಳ್ಳಲಾಗಿದೆ. ಅದರೊಂದಿಗೆ ಕಾಶ್ಮೀರದ ಪುಲ್ವಾಮಾದ ಕೇಸರಿ, ಕೇರಳದ ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ ಹಾಗೂ ಪಟ್ನಾದ ಸಕ್ಕರೆ ‘ರಘುಪತಿ ಲಾಡು’ಗಳ ಸಿಹಿ ಮತ್ತು ರುಚಿಯನ್ನು ಹೆಚ್ಚಿಸಿವೆ.

ಭೂಮಿ ಪೂಜೆಗಾಗಿಯೇ ಪಟ್ನಾದ ಮಹಾವೀರ ಮಂದಿರ ಟ್ರಸ್ಟ್‌ ಒಟ್ಟು 1.25 ಲಕ್ಷ ಲಾಡುಗಳನ್ನು ತಯಾರಿಸಿದೆ. ಆ ಪೈಕಿ 51 ಸಾವಿರ ಲಾಡುಗಳನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಿತ್ತು. ಉಳಿದ ಲಾಡುಗಳನ್ನು ಬಿಹಾರದಲ್ಲಿರುವ ಸೀತಾ ಜನ್ಮಸ್ಥಳ ಸೀತಾಮಾರಿ ಮತ್ತು ಇತರ 25 ಪುಣ್ಯಕ್ಷೇತ್ರಗಳಲ್ಲಿ ಹಂಚಲಾಯಿತು.

ADVERTISEMENT

ಮಹಾವೀರ ಮಂದಿರ ಟ್ರಸ್ಟ್‌ ರಾಮಮಂದಿರ ನಿರ್ಮಾಣಕ್ಕೆ ₹2 ಕೋಟಿ ದೇಣಿಗೆ ನೀಡಿದ್ದು, ಇನ್ನೂ ₹8 ಕೋಟಿ ನೀಡುವ ವಾಗ್ದಾನ ಮಾಡಿದೆ. ಅಯೋಧ್ಯೆಗೆ ಬರುವ ಭಕ್ತರಿಗಾಗಿ ‘ರಾಮ ರಸೋಯಿ’ ಭೋಜನಾಲಯ ತೆರೆದಿದ್ದು, ನಿತ್ಯ ಅನ್ನಸಂತರ್ಪಣೆ ಮಾಡುತ್ತದೆ.

ಪವಿತ್ರ ಜಲ,ಪಾರಿಜಾತ ಮತ್ತು ಅಂಚೆಚೀಟಿ

*ದೇಶದ ನಾನಾ ಭಾಗ ಮತ್ತು ಎರಡು ಸಾವಿರ ಪವಿತ್ರ ಕ್ಷೇತ್ರಗಳಿಂದ ತರಲಾದ ಮಣ್ಣು ಮತ್ತು ನೂರಕ್ಕೂ ಹೆಚ್ಚು ನದಿಗಳಿಂದ ತರಲಾದ ಪವಿತ್ರ ಜಲವನ್ನು ಪೂಜೆಗೆ ಬಳಸಲಾಯಿತು

*ರಾಮ ಜನ್ಮಭೂಮಿ ಮಂದಿರ ಭೂಮಿಪೂಜೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದರು. ರಾಮಮಂದಿರ ಮತ್ತು ಅದರ ಹಿನ್ನೆಲೆಯಲ್ಲಿ ಬಿಲ್ಲುಧಾರಿ ರಾಮನ ಚಿತ್ರವು ಅಂಚೆಚೀಟಿಯಲ್ಲಿ ಇದೆ

*ಭೂಮಿಪೂಜೆಗೂ ಮುನ್ನ ಮಂದಿರದ ಪ್ರಾಂಗಣದಲ್ಲಿ ಮೋದಿ ಪಾರಿಜಾತ ಹೂವಿನ ಸಸಿ ನೆಟ್ಟರು. ಪಾರಿಜಾತ ಪುಷ್ಪ ದೇವರ ಪ್ರೀತಿಗೆ ಪಾತ್ರವಾದ ಅತ್ಯಂತ ಪವಿತ್ರವಾದ ಹೂವು ಎಂಬುವುದು ಹಿಂದೂಗಳ ನಂಬಿಕೆ. ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಪಾರಿಜಾತ ಪುಷ್ಪದ ಪ್ರಸ್ತಾಪವಿದೆ

*ರಾಮಜನ್ಮಭೂಮಿ ಪ್ರದೇಶದಲ್ಲಿರುವ ಹನುಮಾನ ಗರ್ಹಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿಗೆ, ಮುಖ್ಯ ಅರ್ಚಕ ಬೆಳ್ಳಿಯ ಮುಕುಟ (ಕಿರೀಟ) ಮತ್ತು ಶಲ್ಯ ನೀಡಿದರು

40 ಕೆ.ಜಿ. ಬೆಳ್ಳಿ ಇಟ್ಟಿಗೆಯ ಬುನಾದಿ

‘ಜೈ ಶ್ರೀರಾಮ್‌’ ಎಂದು ಕೆತ್ತಲಾಗಿದ್ದ 40 ಕೆ.ಜಿ. ತೂಕದ ಬೆಳ್ಳಿಯ ಇಟ್ಟಿಗೆಯನ್ನು ಮಂದಿರ ನಿರ್ಮಾಣ ಭೂಮಿ ಪೂಜೆಗೆ ಬಳಸಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ ಈ ಇಟ್ಟಿಗೆಯ ಬೆಲೆ ₹28 ಲಕ್ಷ ಎಂದು ಅಂದಾಜಿಸಲಾಗಿದೆ.

ದಾನಿಗಳು ನೀಡಿದ್ದ ಬೆಳ್ಳಿಯ ಇಟ್ಟಿಗೆಗಳು ಮತ್ತು ಬೆಳ್ಳಿಯ ವೀಳ್ಯದ ಎಲೆಗಳನ್ನು ಪೂಜೆಯ ವೇಳೆ ಸಾಂಕೇತಿಕವಾಗಿ ಬಳಸಲಾಯಿತು. ಸಮಾರಂಭ ಮುಗಿದ ನಂತರ ಬೆಳ್ಳಿಯ ಇಟ್ಟಿಗೆಗಳನ್ನು ತೆಗೆದು ಬ್ಯಾಂಕ್‌ ಲಾಕರ್‌ನಲ್ಲಿ ಇಡಲಾಗುವುದು ಎಂದು ಟ್ರಸ್ಟ್‌ ಹೇಳಿದೆ. ಮುಂದಿನ ದಿನಗಳಲ್ಲಿ ಈ ಬೆಳ್ಳಿಯ ಇಟ್ಟಿಗೆಗಳನ್ನು ಹರಾಜು ಹಾಕಲಾಗುವುದು. ಅದರಿಂದ ಬಂದ ಹಣವನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಟ್ರಸ್ಟ್‌ ಹೇಳಿದೆ.

1989ರಲ್ಲಿ ದೇಶ ಮತ್ತು ವಿದೇಶಗಳಿಂದ ರಾಮಭಕ್ತರು ಅಯೋಧ್ಯೆಗೆ ಕಳಿಸಿದ್ದ ಒಂಬತ್ತು ಇಟ್ಟಿಗೆಗಳನ್ನು ಭೂಮಿಪೂಜೆಯಲ್ಲಿ ಬಳಸಲಾಯಿತು. ಮೂರು ದಶಕಗಳ ಹಿಂದೆ ಒಟ್ಟು 2.75 ಲಕ್ಷ ಇಟ್ಟಿಗೆಗಳನ್ನು ಕರಸೇವಕರು ಅಯೋಧ್ಯೆಗೆ ಹೊತ್ತು ತಂದಿದ್ದರು. ಆ ಇಟ್ಟಿಗೆಗಳ ಪೈಕಿ ‘ಜೈ ಶ್ರೀರಾಮ್‌’ ಎಂದು ಬರೆಯಲಾಗಿದ್ದ ನೂರು ಇಟ್ಟಿಗೆಗಳನ್ನು ಆಯ್ಕೆ ಮಾಡಲಾಗಿತ್ತು. ನೂರರಲ್ಲಿ ಒಂಬತ್ತು ಇಟ್ಟಿಗೆಗಳನ್ನು ಮಾತ್ರ ಪೂಜೆಗೆ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.