ನವದೆಹಲಿ: ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲು ಎರಡು ವರ್ಷ ಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ದೆಹಲಿಯ ಪೇಜಾವರ ಮಠದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ 48 ದಿನ ಮಂಡಲೋತ್ಸವದ ಜತೆಗೆ ವಿಶೇಷ ಧಾರ್ಮಿಕ ಅನುಷ್ಠಾನಗಳು ಭಾನುವಾರ ಸರಯೂ ನದಿಯಲ್ಲಿ ಅವಭೃತ ಸ್ನಾನದ ಮೂಲಕ ಪೂರ್ಣಗೊಂಡಿತು’ ಎಂದು ತಿಳಿಸಿದರು.
‘ಭಾರತದ ಹೊರಗೂ ಕೂಡ ಅನೇಕ ಮಂದಿ ರಾಮ ತಾರಕ ಜಪ ಮಂತ್ರ ಪಠಣ, ಯಾಗ ಯಜ್ಞಗಳನ್ನು ನಡೆಸಿದರು. ಎಲ್ಲವನ್ನೂ ನಾವು ರಾಮ ದೇವರಿಗೆ ಸಮರ್ಪಿಸಿದ್ದೇವೆ. ಭಗವಂತನ ಸನ್ನಿಧಾನ ವಿಶೇಷವಾಗಿ ಮೂಡಬೇಕು ಎಂದು ಪ್ರತಿದಿನ ಮುಸ್ಸಂಜೆ ವೇಳೆ ಪಲ್ಲಕ್ಕಿ ಉತ್ಸವ ನಡೆಸಿದೆವು. ಕಾಶಿ ಮಠದಿಂದ ರಜತ ಪಲ್ಲಕ್ಕಿ ಸಮರ್ಪಣೆಯಾಗಿರುವುದು ವಿಶೇಷ’ ಎಂದು ತಿಳಿಸಿದರು. ಸದ್ಯ ದಿನಕ್ಕೆ 3 ಲಕ್ಷ ಮಂದಿ ರಾಮನ ದರ್ಶನ ಮಾಡುತ್ತಾ ಇದ್ದಾರೆ ಎಂದು ವಿವರಿಸಿದರು.
‘ಈಗ ಶ್ರೀರಾಮನಿಗೆ ಸೂರು ಕಟ್ಟಿಕೊಟ್ಟಿದ್ದೇವೆ. ರಾಮ ಜನ್ಮ ಸ್ಥಳದಲ್ಲಿಯೇ ಹುಟ್ಟಿದ ಜಾಗದಲ್ಲಿ ಅವನ ದರ್ಶನ ಭಾಗ್ಯ ಸಿಗುತ್ತಿದೆ. ಈ ಹೊತ್ತಿನಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ನಾವು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.