Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ
ಪ್ರಜಾವಾಣಿ ವೆಬ್ ಡೆಸ್ಕ್
Published 22 ಜನವರಿ 2024, 12:59 IST
Last Updated 22 ಜನವರಿ 2024, 12:59 IST
ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಪ್ರದಕ್ಷಿಣೆ ಬಂದ ಪ್ರಧಾನಿ ನರೇಂದ್ರ ಮೋದಿ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇದ್ದಾರೆ.
ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ನಗರ ಸಡಗರದಿಂದ ಸಜ್ಜಾಗಿದ್ದು, ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. ರಾಮ ಮಂದಿರ ಸುತ್ತಮುತ್ತ ಸೇರಿದಂತೆ ಅಯೋಧ್ಯೆ ನಗರದಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಇಂದಿನ ಕಾರ್ಯಕ್ರಮಗಳು: ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ. ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ. ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ. ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ
ಬಾಲಿವುಡ್ ನಟ ವಿಕ್ಕಿ ಕೌಶಲ್, ನಟಿ ಕತ್ರಿನಾ ಕೈಫ್ ಅವರು ಮುಂಬೈನಿಂದ ಅಯೋಧ್ಯೆಗೆ ತೆರಳಿದರು.
ನನಗೆ ಭಗವಂತ ಹನುಮಂತನೇ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗ ಆಹ್ವಾನ ನೀಡಿದ್ದಾನೆ ಎಂದು ಅನಿಸುತ್ತಿದೆ ಎಂದು ನಟ ಚಿರಂಜೀವಿ ಹೇಳಿದ್ದಾರೆ. ಅವರು ಸಹ ಹೈದರಾಬಾದ್‌ನಿಂದ ಅಯೋಧ್ಯೆಯತ್ತ ತೆರಳಿದರು.
ಅಯೋಧ್ಯೆ ತಲುಪಿದ ನಟ ಅಮಿತಾಭ್ ಬಚ್ಚನ್, ಕ್ರಿಕೆಟಿಗ ವಿರಾಟ್ ಕೊಹ್ಲಿ
ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು ಪೂಜಾರಿಗಳು ವಿವಿಧ ಪೂಜಾ ವಿಧಿ ವಿಧಾನಗಳನ್ನು ಶಾಸ್ತ್ರೊಕ್ತವಾಗಿ ನೆರವೇರಿಸುತ್ತಿದ್ದಾರೆ.
ಆರತಿ ವೇಳೆ ರಾಮ ಮಂದಿರದ ಮೇಲೆ ಸೇನಾ ಹೆಲಿಕಾಪ್ಟರ್‌ಗಳಿಂದ ಪುಷ್ಪ ಮಳೆ
ಭಾರತವು ಇಂದು ತನ್ನ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೆಮ್ಮೆಪಡುತ್ತದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್
ರಾಮ ಪ್ರಾಣ ಪ್ರತಿಷ್ಠಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಅವರು 10.25 ಕ್ಕೆ ದೆಹಲಿ ತಲುಪುವ ನಿರೀಕ್ಷೆ ಇದೆ.
ಇಂದಿನಿಂದ ರಾಮರಾಜ್ಯ ಶುರುವಾಗಲಿದೆ ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ನಾನು ಲಕ್ಷಾಂತರ ಕಾಶ್ಮಿರಿ ಹಿಂದೂಗಳನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ನಟ ಅನುಪಮ್ ಖೇರ್ ಅವರು ಹೇಳಿದ್ದಾರೆ.
ರಾಮ ಪ್ರಾಣ ಪ್ರತಿಷ್ಠಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ಅಯೋಧ್ಯೆ ತಲುಪಿದರು
ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನೇಪಾಳದ ಜಾನಕಿ ಮಂದಿರ ಸಿಂಗಾರಗೊಂಡಿದೆ
ವಿಶೇಷ ಹೆಲಿಕಾಪ್ಟರ್‌ನಲ್ಲಿ ಅಯೋಧ್ಯೆ ರಾಮ ಮಂದಿರ ತಲುಪಿದ ಪ್ರಧಾನಿ ಮೋದಿ
ರಾಮ ಮಂದಿರ ತಲುಪಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೊಂದು ದೈವಿಕ ಕ್ಷಣ ಎಂದು ಹೇಳಿದ್ದಾರೆ
ಪೂರ್ವ ದಿಕ್ಕಿನಿಂದ ಬಾಗಿಲು ಪ್ರವೇಶ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ‘ಮುಖ್ಯ ಯಜಮಾನ’ (ಪುರೋಹಿತರು ಇವರ ಪರವಾಗಿ ವಿಧಿ ವಿಧಾನಗಳನ್ನು ನಡೆಸುತ್ತಾರೆ) ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸಂಕೀರ್ಣವನ್ನು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಲಿದ್ದಾರೆ.
ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ನಿವಾಸ 'ಕಶ್ಯಪ ಕಲಾನಿಕೇತನ'ದಲ್ಲಿ ಸಂಭ್ರಮ ಮನೆ ಮಾಡಿತ್ತು.
ಮಂಗಳೂರು: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಇಲ್ಲಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯುತು.
ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದಿಂದ ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಸಂಭ್ರಮಾಚರಣೆ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರ 'ಜೈ ಶ್ರೀರಾಮ್' ಘೋಷಣೆಗೆ ಪ್ರತಿಯಾಗಿ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದರು. ಇದು ಕೆಲಕಾಲ ಸ್ಥಳದಲ್ಲಿ ಗೊಂದಲ ಸೃಷ್ಟಿಸಿತು.
ಅಯ್ಯೋಧೆಯಲ್ಲಿ ಶ್ರೀರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶುಕ್ರವಾರ ಕಲಬುರಗಿಯ ಹಲವೆಡೆ ಸಂಭ್ರಮ ಮಾಡಿದೆ.
ನಗರದ ಪ್ರಮುಖ ಬೀದಿಗಳು, ಚೌಕ್ ಗಳಲ್ಲಿ ರಾಮನ ಚಿತ್ರವಿಟ್ಟು ಪೂಜೆ ಸಲ್ಲಿಸಿ ಭಕ್ತಿಮೆರೆದರು.
ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ಪ್ರಧಾನಿ ಮೋದಿ ಅವರು ಪೂರ್ವ ಧ್ವಾರದಿಂದ 32 ಮೆಟ್ಟಿಲು ಹತ್ತಿ ಮಂದಿರದ ಒಳಗೆ ಪ್ರವೇಶಿಸಿದರು.
ಜಯಪುರ (ಮೈಸೂರು ಜಿಲ್ಲೆ): ಅಯೋಧ್ಯೆ ಬಾಲರಾಮನ ವಿಗ್ರಹದ ಕೃಷ್ಣಶಿಲೆ ಸಿಕ್ಕ ಸ್ಥಳ, ತಾಲ್ಲೂಕಿನ ಹಾರೋಹಳ್ಳಿಗೆ ಸೋಮವಾರ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ ಸಿಂಹ ಅವರಿಗೆ ದಲಿತ ಮುಖಂಡರು ಘೇರಾವ್ ಹಾಕಿದರು.
ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ರಾಮ ತಾರಕ ಹೋಮಕ್ಕೆ ಅವಕಾಶ ನೀಡದ ಜಿಲ್ಲಾಡಳಿತದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರ ಹೋಮ ನಡೆಸಿದರು.
ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ವಿಧಿ ವಿಧಾನ ಆರಂಭ
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನೆರವೇರಿತು. ಅರ್ಚಕರು, ಪಂಡಿತರು ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ರಾಮ್ ಲಲ್ಲಾನ ವಿಗ್ರಹವನ್ನು ಅನಾವರಣಗೊಳಿಸುತ್ತಿದ್ದಂತೆ ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್‌ಗಳು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಹೂವಿನ ಮಳೆಗೈದವು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನೆರವೇರಿತು. ಅರ್ಚಕರು, ಪಂಡಿತರು ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್, ಗುಜರಾತ್ ಮಾಜಿ ಸಿಎಂ ಆನಂದಿಬೇನ್ ಪಟೇಲ್ ಇದ್ದಾರೆ.
ಶಿವಮೊಗ್ಗ: ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ 'ಅಲ್ಲಾ ಹು ಅಕ್ಬರ್' ಎಂದು ಘೋಷಣೆ ಕೂಗಿದ ಮಹಿಳೆಗೆ ಮಾನಸಿಕ ಸ್ಥೀಮಿತ ಇಲ್ಲ ಎಂದು ಆಕೆಯ ತಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ರಾಯಚೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಸೋಮವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ರಾಮ ತಾರಕ ಹೋಮಕ್ಕೆ ಅವಕಾಶ ನೀಡದ ಜಿಲ್ಲಾಡಳಿತದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರ ಹೋಮ ನಡೆಸಿದರು.
ಪ್ರಧಾನಿ ಮೋದಿ ಅವರು ಬಾಲರಾಮನಿಗೆ ಮಹಾ ಮಂಗಳಾರತಿ ನೆರವೇರಿಸಿದರು
ರಾಮನ ಗರ್ಭಗುಡಿಯಲ್ಲಿ ಮೊಳಗಿದ ಮಂತ್ರಘೋಷ
ರಾಮಮಂದಿರದ ಹೊರ ಆವರಣದಲ್ಲಿ ಬಹಿರಂಗ ಕಾರ್ಯಕ್ರಮ ಆರಂಭ: ಪ್ರಧಾನಿ ಭಾಗಿ
ಗೋವಿಂದ್ ದೇವ್ ಗಿರಿ ಭಾಷಣ
ದೀರ್ಘಕಾಲದ ಕಾಯುವಿಕೆ ನಂತರ, ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ
‘ಆದಿವಾಸಿ ಮಹಿಳೆ ಶಬರಿಯ ಒಂದೇ ದೃಢ ಸಂಕಲ್ಪ, ‘ನನ್ನ ರಾಮ ಬಂದೇ ಬರುತ್ತೇನೆ’ ಎಂಬುದು. ಇದೇ ವಿಶ್ವಾಸವನ್ನು ಭಾರತದ ಪ್ರತಿಯೊಬ್ಬರೂ ಹೊಂದಿದ್ದರು. ಅದು ಈಗ ಸಾಕಾರಗೊಂಡಿದೆ. ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬರನ್ನೂ ನೆನೆಯುವ ಸಮಯವಿದು. ಅವರ ಸಮಪರ್ಣೆಯಿಂದಾಗಿ ನಾವು ಇಂದು ಈ ಶುಭದಿವನ್ನು ನೋಡುತ್ತಿದ್ದೇವೆ. ಹೀಗಾಗಿ ಈ ಕ್ಷಣವು ಉತ್ಸವದ ಕ್ಷಣವೂ ಹೌದು. ಇದು ಕೇವಲ ವಿಜಯದ ದಿನ ಮಾತ್ರವಲ್ಲ, ವಿನಯದ ದಿನವೂ ಹೌದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಗೊಂಡರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹೇಳುತ್ತಿದ್ದರು. ಭಾರತದ ಪವಿತ್ರತೆ ಅರಿಯದ ಮನಸ್ಸುಗಳು ಇಂಥ ಹೇಳಿಕೆಗಳನ್ನು ನೀಡಿವೆ. ಆದರೆ ಧೈರ್ಯ, ಸದ್ಭಾವ ಮತ್ತು ಸಮನ್ವತೆಯ ಪ್ರತೀಕವೂ ಆದ ಭಾರತದಲ್ಲಿ, ರಾಮಮಂದಿರ ಎಂಬುದು ಬೆಂಕಿ ಆಗಲು ಸಾಧ್ಯವಿಲ್ಲ. ಅದು ನಮ್ಮೆಲ್ಲರ ಶಕ್ತಿಯಾಗಿದೆ. ಸಮಾಜದ ಪ್ರತಿ ವರ್ಗದವರಿಗೂ ಉಜ್ವಲ ಭವಿಷ್ಯ ನೀಡಲಿದೆ. ರಾಮ ಎಂಬುದು ವರ್ತಮಾನವಲ್ಲ, ಅನಂತಕಾಲ – ನರೇಂದ್ರ ಮೋದಿ
ಮಂದಿರವೇನೋ ನಿರ್ಮಾಣವಾಗಿದೆ. ಮುಂದೇನು...? ಕಾಲಚಕ್ರ ಬದಲಾಗುತ್ತಿದೆ. ನಮ್ಮ ತಲೆಮಾರನ್ನು ಮಂದಿರ ನಿರ್ಮಾಣಕ್ಕಾಗಿ ಆಯ್ಕೆ ಮಾಡಲಾಗಿದೆ. ಭವಿಷ್ಯ ಈ ತಲೆಮಾರಿನ ಭಾಗವಾಗಿರುವ ಪ್ರತಿಯೊಬ್ಬರನ್ನೂ ಸದಾ ಸ್ಮರಿಸಲಿದೆ. ಈ ಅಮೃತ ಕಾಲದಲ್ಲೇ ಮುಂದಿನ ಸಾವಿರ ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂಬುದರ ಯೋಜನೆ ರೂಪಿಸಬೇಕಿದೆ. ಅದರ ಶಪಥ ಇಂದು ತೆಗೆದುಕೊಳ್ಳಬೇಕಿದೆ. ಅಯೋಧ್ಯಯ ಈ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಲ್ಲಾ... ಭಾರತದ ದೃಷ್ಟಿ, ದರ್ಶನ, ದಿಗ್‌ದರ್ಶನದ ಮಂದಿರ. ರಾಮ ಭಾರತದ ಆಧಾರ, ವಿಚಾರ, ವಿಧಾನ, ಚೇತನಾ, ಚಂತನಾ, ಪ್ರತಿಷ್ಠಾ, ಪ್ರಭಾವ, ನೀತಿ, ನಿತ್ಯತಾ, ನಿರಂತರತೆ, ವ್ಯಾಪಕ, ವಿಶ್ವ ಹಾಗೂ ವಿಶ್ವಾತ್ಮವ ಹೌದು.
ಯುವಜನತೆಯ ಶಕ್ತಿಯಿಂದ ಭಾರತ ಇಂದು ಸಂಪದ್ಭರಿತವಾಗಿದೆ. ಇಂಥ ಅಮೃತ ಕಾಲ ಬರಲು ಮುಂದೆ ಬಹಳಷ್ಟು ವರ್ಷಗಳನ್ನು ನಾವು ಕಾಯಬೇಕು. ಹೀಗಾಗಿ ಈಗ ನಾವು ವಿರಮಿಸುವಂತಿಲ್ಲ. ನಿಮ್ಮ ಬೆನ್ನಿಗೆ ಸಾವಿರಾರು ವರ್ಷಗಳ ಪರಂಪರೆಯ ಪ್ರೇರಣೆ ಇದೆ. ಚಂದ್ರನ ಅಂಗಳದಲ್ಲಿ ತಿರಂಗಾ ಹಾರಾಡುತ್ತಿದೆ. 15 ಲಕ್ಷ ಕಿಲೋ ಮೀಟರ್ ದೂರದಲ್ಲಿ ಆದಿತ್ಯ ಎಲ್1 ಅಧ್ಯಯನ ನಡೆಸುತ್ತಿದೆ. ಇಂಥ ಎಲ್ಲಾ ಸಾಧನೆಗಳ ಮೂಲಕ ಬರಲಿರುವ ಸಮಯವು ಸಫಲತೆಯದ್ದಾಗಿರಲಿದೆ. ಈ ಭವ್ಯ ರಾಮಮಂದಿರ ಇವೆಲ್ಲದಕ್ಕೂ ಸಾಕ್ಷಿಯಾಗಲಿದೆ. ಗುರಿಯು ಸತ್ಯ, ಸಾಮೂಹಿಕ, ಸಂಘಟಿತ ಶಕ್ತಿಯಿಂದ ಕೂಡಿದ್ದಲ್ಲಿ, ಅದರ ಸಾಕಾರ ಶತಸಿದ್ಧ. ಸಿಯಾವರ ರಾಮಂಚಂದ್ರ ಕೀ... ಜೈ ಎಂದು ನರೇಂದ್ರ ಮೋದಿ ಹೇಳಿದರು.
ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಗ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರೊಂದಿಗೆ ‘ರಾಮ ಕೆ ಹೃದಯ್ ಮೆ’ ಗೀತೆಯನ್ನು ಗಾಯಕ ಸೋನು ನಿಗಮ್ ಮತ್ತು ಮಿಲಾನಿ ಅವಸ್ಥಿ ಹಾಡಿದರು. 3.54 ನಿಮಿಷದ ಈ ಭಕ್ತಿಗೀತೆಗೆ ಅಮಿಶ್ ತರಿಪಾಠಿ ಅವರ ಸಾಹಿತ್ಯವಿದೆ.