ಅಯೋಧ್ಯೆ (ಪಿಟಿಐ): ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹವು ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನ ಆಗಲಿದೆ. ಈ ವಿಚಾರವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಸೋಮವಾರ ಪ್ರಕಟಿಸಿದರು. ಜನವರಿ 22ರಂದು ರಾಮ ಮಂದಿರದಲ್ಲಿ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಮೂವರು ಶಿಲ್ಪಿಗಳು ಸಿದ್ಧಪಡಿಸಿರುವ ವಿಗ್ರಹಗಳ ಪೈಕಿ ಅರುಣ್ ಕೆತ್ತಿರುವ ವಿಗ್ರಹವೇ ಆಯ್ಕೆಯಾಗಿದೆ ಎಂಬ ಸುದ್ದಿ ಈ ಹಿಂದೆಯೇ ಹರಡಿತ್ತು. ಬಿಜೆಪಿಯ ಕೆಲವು ಪ್ರಮುಖರು ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಟ್ರಸ್ಟ್ ಕಡೆಯಿಂದ ಇದುವರೆಗೂ ಅಧಿಕೃತ ಘೋಷಣೆ ಆಗಿರಲಿಲ್ಲ.
‘ಕಳೆದ 70 ವರ್ಷಗಳಿಂದ ಪೂಜಿಸಲಾಗುತ್ತಿರುವ ರಾಮಲಲ್ಲಾನ ವಿಗ್ರಹವನ್ನು ಕೂಡ ನೂತನ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು’ ಎಂದು ರಾಯ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅರುಣ್ ಕೆತ್ತಿರುವ ವಿಗ್ರಹದ ಬಗ್ಗೆ ಮಾಹಿತಿ ನೀಡಿದ ರಾಯ್ ಅವರು, ‘ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ವಿಗ್ರಹವನ್ನು ಶಿಲೆಯಿಂದ ಕೆತ್ತಲಾಗಿದ್ದು, 150ರಿಂದ 200 ಕೆ.ಜಿ. ಭಾರ ಇದೆ. ಐದು ವರ್ಷದ ಬಾಲಕನ ಪ್ರತಿರೂಪದಂತೆ ವಿಗ್ರಹ ಕೆತ್ತಲಾಗಿದೆ’ ಎಂದು ವಿವರಿಸಿದರು.
‘ವಿಗ್ರಹವನ್ನು ಜನವರಿ 18ರಂದು ಗರ್ಭಗುಡಿಯಲ್ಲಿ ಇರಿಸಲಾಗುವುದು. ಪ್ರತಿಷ್ಠಾಪನಾ ಸಮಾರಂಭದ ಮುಹೂರ್ತವನ್ನು ವಾರಾಣಸಿಯ ಜ್ಞಾನೇಶ್ವರ ಶಾಸ್ತ್ರಿ ದ್ರಾವಿಡ ಅವರು ನಿಗದಿಪಡಿಸಿದ್ದಾರೆ’ ಎಂದು ಹೇಳಿದರು.
‘ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿ ವಿಧಿಗಳು ಮಂಗಳವಾರ (ಜನವರಿ 16) ಆರಂಭವಾಗಲಿದ್ದು, ಜನವರಿ 21ರವರೆಗೂ ಮುಂದುವರಿಯಲಿವೆ. ಪ್ರತಿಷ್ಠಾಪನೆಗೆ ಅಗತ್ಯವಿರುವ ಕೆಲವು ವಿಧಿಗಳನ್ನಷ್ಟೇ ಜನವರಿ 22ರಂದು ನಡೆಸಲಾಗುವುದು’ ಎಂದು ತಿಳಿಸಿದರು.
ಟ್ರಸ್ಟ್ ಸದಸ್ಯರ ಮೆಚ್ಚುಗೆ: ಅರುಣ್ ಕೆತ್ತಿರುವ ವಿಗ್ರಹಕ್ಕೆ ಟ್ರಸ್ಟ್‌ನ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ಇಂಡಿಯಾ ಗೇಟ್ ಬಳಿ ಸ್ಥಾಪಿಸಿರುವ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅರುಣ್ ಅವರೇ ಕೆತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.