ನವದೆಹಲಿ:ಮಹಿಳಾ ಸಬಲೀಕರಣ, ದೇಶದ ಆರ್ಥಿಕ ಅಭಿವೃದ್ಧಿ ಮತ್ತುರೈತರ ಕಲ್ಯಾಣವೇ ಸರ್ಕಾರದ ಪ್ರಮುಖ ಆದ್ಯತೆ ಎಂದುರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ಅವರು ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಗುರುವಾರ ಭಾಷಣ ಮಾಡಿದರು.
‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 61 ಕೋಟಿಗೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ. ಇದು ಹೊಸ ದಾಖಲೆ ನಿರ್ಮಿಸಿದೆ. ಭಾರತದ ಜನ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಹಾದಿಯಲ್ಲಿ ಈ ಸರ್ಕಾರ ಸಾಗುತ್ತಿದೆ’ ಎಂದು ಕೋವಿಂದ್ ಹೇಳಿದರು.
ಭಾಷಣದ ಮುಖ್ಯಾಂಶಗಳು
* ಮುಂದಿನ ತಲೆಮಾರಿನವರಿಗಾಗಿ ನಾವು ನೀರನ್ನು ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯ ಸ್ಥಾಪಿಸಿರುವುದು ನಿರ್ಣಾಯಕ ಹೆಜ್ಜೆ
* ಅತಿ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು
* 112 ಮಾದರಿ ಜಿಲ್ಲೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ
* ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಸಲುವಾಗಿ ತ್ರಿವಳಿ ತಲಾಖ್, ನಿಖಾ–ಹಲಾಲದಂತಹ ಆಚರಣೆಗಳಿಂದ ದೂರವಿರಬೇಕು.
* ಮಹಿಳೆಯರ ಸಬಲೀಕರಣ ನನ್ನ ಸರ್ಕಾರದ ಪ್ರಮುಖ ಆದ್ಯತೆ. ಮಹಿಳೆಯರು ಬೆಳವಣಿಗೆ ಹೊಂದುವುದಷ್ಟೇಅಲ್ಲ, ಅಭಿವೃದ್ಧಿಯ ನೇತೃತ್ವ ವಹಿಸಿಕೊಳ್ಳುವಂತಾಗಬೇಕು.
* ‘ರಾಷ್ಟ್ರೀಯ ಜೀವನೋಪಾಯ ಮಿಷನ್’ ಅಡಿ ಗ್ರಾಮೀಣ ಪ್ರದೇಶದ 3 ಕೋಟಿಮಹಿಳೆಯರಿಗೆ ₹2 ಲಕ್ಷ ಕೋಟಿ ವಿತರಿಸಲಾಗಿದೆ.
* ಆಯುಷ್ಮಾನ್ ಭಾರತ್ ಯೋಜನೆಯಿಂದ 26 ಲಕ್ಷ ಬಡ ರೋಗಿಗಳಿಗೆ ಪ್ರಯೋಜನವಾಗಿದೆ.
* ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸ್ವ–ಉದ್ಯೋಗಕ್ಕಾಗಿ 19 ಕೋಟಿ ಜನರಿಗೆ ಸಾಲ ನೀಡಲಾಗಿದೆ. ಈ ಯೋಜನೆಯ ವ್ಯಾಪ್ತಿಯನ್ನು 30 ಕೋಟಿ ಜನರಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
* ಕಪ್ಪುಹಣದ ವಿರುದ್ಧದ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಬೇಕಿದೆ. ಕಳೆದ 2 ವರ್ಷಗಳಲ್ಲಿ 4 ಲಕ್ಷಕ್ಕೂ ಹೆಚ್ಚು ನಿರ್ದೇಶಕರನ್ನು ಮತ್ತು 3 ಲಕ್ಷದಷ್ಟು ಬೋಗಸ್ ಕಂಪನಿಗಳನ್ನುಅನರ್ಹಗೊಳಿಸಲಾಗಿದೆ.
* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಿದ್ಧಿ (ಪಿಎಂ–ಕಿಸಾನ್) ಯೋಜನೆಯ ಪ್ರಯೋಜನವನ್ನು ದೇಶದ ಎಲ್ಲ ರೈತರಿಗೆ ವಿಸ್ತರಿಸಲಾಗಿದೆ ಎಂದು ಕೋವಿಂದ್ ಮಾಹಿತಿ ನೀಡಿದರು. 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ, ಆರ್ಥಿಕವಾಗಿ ಹಿಂದುಳಿದ ರೈತರಿಗೆ ಮಾಸಿಕ ₹2,000ದಂತೆ ವರ್ಷಕ್ಕೆ ₹6,000 ಆದಾಯ ಬೆಂಬಲ ನೀಡುವ ಯೋಜನೆಯನ್ನುಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.
* ವೀರ ಯೋಧರ ಮಕ್ಕಳಿಗೆರಾಷ್ಟ್ರೀಯ ರಕ್ಷಣಾ ನಿಧಿ ಅನ್ವಯ ನೀಡಲಾಗುವ ವಿದ್ಯಾರ್ಥಿವೇತನದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಯೋಜನೆಗೆ ಪೊಲೀಸ್ ಸಿಬ್ಬಂದಿಯ ಮಕ್ಕಳನ್ನೂ ಸೇರ್ಪಡೆಗೊಳಿಸಿರುವುದು ಇದೇ ಮೊದಲು ಎಂದು ಕೋವಿಂದ್ ಮಾಹಿತಿ ನೀಡಿದರು.
* ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದೆ. ಇಂದು ಭಾರತವು ಮೀನು ಉತ್ಪಾದನಾ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಚಾರದಲ್ಲಿ ದೇಶವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯ ನಮ್ಮಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.