ADVERTISEMENT

ಇದು ಹಿಮಾಚಲದ 'ರಾಮರಾಜ್ಯ': ಇಲ್ಲಿ ಅಪರಾಧ ಕೃತ್ಯಗಳೇ ನಡೆದಿಲ್ಲ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 20:00 IST
Last Updated 1 ಜನವರಿ 2020, 20:00 IST
   

ಚಂಡಿಗಡ: ಭಾರತದ ಯಾವುದೇ ಜಿಲ್ಲೆಗೆ ಇಲ್ಲದ ಅಪೂರ್ವ ಹೆಚ್ಚುಗಾರಿಕೆಗೆ ಹಿಮಾಚಲ ಪ್ರದೇಶದ ಲಾಹೌಲ್‌–ಸ್ಪಿತಿ ಜಿಲ್ಲೆ ಪಾತ್ರವಾಗಿದೆ. ನಿಜವಾದ ಅರ್ಥದಲ್ಲಿ ಇದು ರಾಮರಾಜ್ಯ. ದಶಕದಲ್ಲಿ ಇಲ್ಲಿ ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ, ದರೋಡೆ, ವಂಚನೆ, ವರದಕ್ಷಿಣೆ ಸಾವು, ಅಪಹರಣ, ಅಪರಾಧ ಒಳಸಂಚಿನಂತಹ ಅಪರಾಧ ಪ್ರಕರಣ ದಾಖಲಾಗಿಲ್ಲ.

ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಊರು ಮಾತ್ರ ಯಾವ ಅಪರಾಧ ಕೃತ್ಯವೂ ಇಲ್ಲದೆ ಕಂಗೊಳಿಸುತ್ತಿದೆ. ಗುಡ್ಡಗಾಡುಗಳಿಂದಲೇ ಕೂಡಿರುವ ಈ ಜಿಲ್ಲೆ ಚಳಿಗಾಲದಲ್ಲಿ ಮಂಜು ಹೊದ್ದು ಮಲಗಿರುತ್ತದೆ. ಚಳಿಗಾಲದ ಹಲವು ತಿಂಗಳು ಈ ಪ್ರದೇಶವು ದೇಶದ ಇತರೆಡೆಗಳೊಂದಿಗಿನ ಸಂಪರ್ಕ ಕಡಿದುಕೊಳ್ಳುತ್ತದೆ.

ಲಾಹೌಲ್‌ ಜನರು ಶಾಂತಿಪ್ರಿಯರು, ಸೌಹಾರ್ದಕ್ಕೆ ಹೆಸರಾದವರು. 14 ಸಾವಿರ ಚ. ಕಿ.ಮೀ ಪ್ರದೇಶದ ಜನಸಂಖ್ಯೆ 32 ಸಾವಿರ ಮಾತ್ರ. ‘ಇಲ್ಲಿನ ಜನರಿಗೆ ಧರ್ಮದ ಮೇಲೆ ನಂಬಿಕೆ ಹೆಚ್ಚು. ಸಮುದಾಯ ಹಬ್ಬಗಳು, ಪೂಜೆಗಳು ತಮ್ಮನ್ನು ಅಪರಾಧಗಳಿಂದ ದೂರ ಇರಿಸುತ್ತವೆ ಎಂದು ಜನರು ನಂಬಿದ್ದಾರೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ರಾಕೇಶ್‌ ಶರ್ಮಾ ಹೇಳುತ್ತಾರೆ.

ADVERTISEMENT

ಅಧಿಕೃತ ದಾಖಲೆಗಳ ಪ್ರಕಾರ, ಐದು ವರ್ಷಗಳಲ್ಲಿ ಅತ್ಯಾಚಾರ ಆರೋಪದ ಒಂದೂ ಪ್ರಕರಣ ದಾಖಲಾಗಿಲ್ಲ. ಕೆಲವು ಅಪರಾಧ ಕೃತ್ಯಗಳ ದೂರು ದಾಖಲಾಗಿವೆ. ಅವೆಲ್ಲವೂ ವಲಸೆ ಬಂದ ಕಾರ್ಮಿಕರಿಗೆ ಸಂಬಂಧಿಸಿದ್ದಾಗಿವೆ. 2001ರ ಬಳಿಕ ದಾಖಲಾಗಿರುವ ದೂರುಗಳ ಸಂಖ್ಯೆ ಸುಮಾರು 700 ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.