ಲಖನೌ: ‘ಮುಂದಿನ ವರ್ಷ ರಾಮ ಮಂದಿರ ಉದ್ಘಾಟಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ, ಅಯೋಧ್ಯೆಯ ಸೌಂದರ್ಯೀಕರಣದ ಜೊತೆಗೆ ಎಲ್ಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಭಾನುವಾರ ನಿರ್ದೇಶನ ನೀಡಿದರು.
ಅಯೋಧ್ಯೆಗೆ ಶನಿವಾರ ಭೇಟಿ ನೀಡಿದ ಬೆನ್ನಲ್ಲೇ, ನಗರದಲ್ಲಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಅಯೋಧ್ಯೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು, ರಾಮ ಮಂದಿರದ ಭದ್ರತೆ ನಿರ್ವಹಣೆಗೆ ಸಂಬಂಧಿಸಿದ ಕ್ರಿಯಾಯೋಜನೆ ಕುರಿತು ಚರ್ಚಿಸಿದರು.
‘ರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ಪ್ರತಿಯೊಬ್ಬ ಭಕ್ತ ಕೂಡ ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕನಾಗಿದ್ದಾನೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿಯೇ ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಆದ್ಯತೆ’ ಎಂದು ಹೇಳಿದರು.
ಅಯೋಧ್ಯೆಯಲ್ಲಿನ ಎಲ್ಲ ಮಠಗಳು ಹಾಗೂ ದೇವಾಲಯಗಳಿಗೆ ಬಣ್ಣ ಬಳಿಯಬೇಕು
ನಿರ್ದಿಷ್ಟ ವಿಷಯ ಆಧರಿಸಿ ಇಡೀ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಬೇಕು
ನಗರದಲ್ಲಿ ಎಲ್ಲಿಯೂ ನೀರು ನಿಲ್ಲಬಾರದು
ಸ್ವಚ್ಛತೆ ಕಾಪಾಡಲು ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಬೇಕು
ಜನ್ಮಭೂಮಿ ಪಥ, ಭಕ್ತಿ ಪಥ ಹಾಗೂ ರಾಮ ಪಥ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.