ಶಿಮ್ಲಾ: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನಾಳೆ (ಸೋಮವಾರ) ಸಾರ್ವಜನಿಕ ರಜೆ ಘೋಷಿಸಿದ್ದಾರೆ.
ಇಂದು (ಭಾನುವಾರ) ಶಿಮ್ಲಾದಲ್ಲಿರುವ ರಾಮ ದೇಗುಲಕ್ಕೆ ಭೇಟಿ ನೀಡಿದ ಅವರು, ‘ಕೇಂದ್ರ ಸರ್ಕಾರ ಜನವರಿ 22ರಂದು ಅರ್ಧ ದಿನದ ರಜೆ ಘೋಷಿಸಿದೆ. ಆದರೆ ನಾವು ಪೂರ್ಣ ದಿನದ ರಜೆ ಘೋಷಿಸುತ್ತಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಭಗವಾನ್ ರಾಮನು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಅವರು ಪ್ರತಿಯೊಬ್ಬರ ಆದರ್ಶ ಮತ್ತು ದೇಶದ ಸಂಸ್ಕೃತಿ ಎಂದರು. ಅಲ್ಲದೆ, ನಾಳೆ ಎಲ್ಲರ ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
‘ನಾಳೆ ನಾನು ನಮ್ಮ ಮನೆಯಲ್ಲಿ ದೀಪವನ್ನು ಬೆಳಗಿಸುತ್ತೇನೆ ಮತ್ತು ಇತರರು ದೀಪ ಬೆಳಗಿಸುವಂತೆ ಪ್ರೋತ್ಸಾಹಿಸುತ್ತೇನೆ. ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ’ ಎಂದು ಅವರು ಹೇಳಿದರು.
ರಾಜ್ಯದ ಜಖುವಿನಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಸಿಎಂ ಸುಖು ತಿಳಿಸಿದರು.
ನಾಳೆ (ಸೋಮವಾರ) ಅಯೋಧ್ಯೆಯ ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠಾಪನಾ’ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.