ಅಯೋಧ್ಯೆ ರಾಮ ಜನ್ಮಭೂಮಿ ವಿವಾದವು ತಮಿಳುನಾಡಿನಲ್ಲಿ ಹೇಳಿಕೊಳ್ಳುವಂತಹ ಪರಿಣಾಮವನ್ನೇನೂ ಉಂಟುಮಾಡುವುದಿಲ್ಲ. ಆದರೆ ಈ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಸುಪ್ರೀಂ ಕೋರ್ಟ್ ರಚಿಸಿರುವ ಮಧ್ಯಸ್ಥಿಕೆ ಸಮಿತಿಯಲ್ಲಿ ಇರುವ ಮೂವರೂ ತಮಿಳುನಾಡಿನವರೇ ಆಗಿದ್ದಾರೆ.
ನ್ಯಾ.ಎಫ್.ಎಂ.ಐ.ಖಲೀಫುಲ್ಲಾ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಇಬ್ರಾಹಿಂ ಖಲೀಫುಲ್ಲಾ (68) ಅವರು ದಕ್ಷಿಣ ತಮಿಳುನಾಡಿನ ಕಾರೈಕುಡಿಯವರು. ಕಾರ್ಮಿಕ ಕಾನೂನಿನಲ್ಲಿ ಪರಿಣಿತ. 2000ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ. 2012ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ. ವಕೀಲರಾಗಿ 20 ವರ್ಷ, ನ್ಯಾಯಮೂರ್ತಿಯಾಗಿ 16 ವರ್ಷ ಅನುಭವ.
ಮಧ್ಯಸ್ಥಿಕೆ ಸಮಿತಿಗೆ ನನ್ನನ್ನು ಸುಪ್ರೀಂ ಕೋರ್ಟ್ ಆಯ್ಕೆ ಮಾಡಿರುವ ವಿಚಾರ ಗೊತ್ತಾಗಿದೆ. ಆದೇಶ ಪ್ರತಿ ಇನ್ನೂ ನನ್ನ ಕೈ ಸೇರಬೇಕಿದೆ. ಸಮಿತಿ ರಚನೆಯಾದರೆ, ಈ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇವೆ–ನ್ಯಾ.ಎಫ್.ಎಂ.ಖಲೀಫುಲ್ಲಾ
ಶ್ರೀ ಶ್ರೀ ರವಿಶಂಕರ್
ಶ್ರೀ ಶ್ರೀ ರವಿಶಂಕರ್ ಗುರು (62) ಅವರ ಹುಟ್ಟೂರು ತಮಿಳುನಾಡಿನ ತಂಜಾವೂರಿನ ಪಾಪನಾಶಂ. 1981ರಲ್ಲಿ ಬೆಂಗಳೂರಿನಲ್ಲಿ ‘ಆರ್ಟ್ ಆಫ್ ಲಿವಿಂಗ್’ ಆರಂಭಿಸಿದ ಅವರು ಈಗ ಆಧ್ಯಾತ್ಮಿಕ ಗುರುವಾಗಿ ಖ್ಯಾತರಾಗಿದ್ದಾರೆ. ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಂಬಂಧಿತ ‘ಪಾರ್ಟಿ’ಗಳ ಮನವೊಲಿಸಿಲು ಈ ಹಿಂದೆ ಪ್ರಯತ್ನಿಸಿದ್ದರು.
ಎಲ್ಲರನ್ನೂ ಗೌರವಿಸುತ್ತ, ಕನಸನ್ನು ನನಸಾಗಿಸುತ್ತ ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಲುದೀರ್ಘಾವಧಿಯ ಸಂಘರ್ಷವನ್ನು ಕೊನೆಗಾಣಿಸಬೇಕಿದೆ. ಈ ಗುರಿಗಳತ್ತ ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆಯಿಡಬೇಕು– ಶ್ರೀ ಶ್ರೀ ರವಿಶಂಕರ್ ಗುರು
ಶ್ರೀರಾಂ ಪಂಚು
ವಕೀಲ ಶ್ರೀರಾಂ ಪಂಚು ಅವರು ಭಾರತದ ಅತ್ಯುನ್ನತ ಸಂಧಾನಕಾರರಲ್ಲಿ ಒಬ್ಬರು ಎಂದು ಸ್ವತಃ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ‘ಮಧ್ಯಸ್ಥಿಕೆ’ಯನ್ನು ಪ್ರಚುರಪಡಿಸಿದ ಹೆಗ್ಗಳಿಕೆ ಇವರದು. ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ದೇಶದ ಕೆಲವು ಪ್ರಮುಖ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವಣ 500 ಚದರ ಕಿ.ಮೀ. ಭೂಮಿಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಇವರನ್ನು ಸಂಧಾನಕಾರರಾಗಿ ನೇಮಕ ಮಾಡಿತ್ತು. ಇವರು ಚೆನ್ನೈನವರು.
ಇದು ಸುಪ್ರೀಂ ಕೋರ್ಟ್ ನನಗೆ ನೀಡಿರುವ ಅತ್ಯಂತ ದೊಡ್ಡ ಹೊಣೆ. ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ– ಶ್ರೀರಾಂ ಪಂಚು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.