ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತು ವಿಚಾರಣಾಧೀನ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ವಿಚಾರಣಾಧೀನ ನ್ಯಾಯಾಲಯವು ಪ್ರಿಯಾರಮಣಿ ವಿರುದ್ಧ ನಾನು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ನನ್ನ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವೆಂದು ಪರಿಗಣಿಸಿದೆ’ ಎಂದು ಅಕ್ಬರ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.
‘ಸಾಕ್ಷ್ಯಾಧಾರಗಳನ್ನು ದೃಢಪಡಿಸಿಕೊಳ್ಳದೆಯೇ ಮತ್ತು ಊಹೆಯ ಆಧಾರದ ಮೇಲೆ ವಿಚಾರಣಾಧೀನ ನ್ಯಾಯಾಲಯವು ದೋಷಪೂರಿತ ತೀರ್ಪು ನೀಡಿದೆ. ಹಾಗಾಗಿ, ಪ್ರಿಯಾ ರಮಣಿ ದೋಷಮುಕ್ತರಾಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ಅಕ್ಬರ್ ಅವರ ಪರ ವಾದಿಸಿದ ಹಿರಿಯ ವಕೀಲರಾದ ರಾಜೀವ್ ನಾಯರ್ ಮತ್ತು ಗೀತಾ ಲೂಥ್ರಾ ಅವರು, ‘ಪ್ರಿಯಾ ರಮಣಿ ಅವರು ಮಾಡಿದ್ದ ಆರೋಪಗಳು ಮಾನಹಾನಿಕರ ಎಂದು ತೀರ್ಮಾನಿಸಿದ್ದರೂ ವಿಚಾರಣಾಧೀನ ನ್ಯಾಯಾಲಯವು ತಪ್ಪಾಗಿ ಪ್ರಿಯಾ ಅವರನ್ನು ಖುಲಾಸೆಗೊಳಿಸಿತು’ ಎಂದು ವಾದಿಸಿದರು.
ಈ ಸಂಬಂಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಪ್ರಿಯಾ ರಮಣಿ ಅವರಿಗೆ ನೋಟಿಸ್ ನೀಡಿದ್ದು, ಅಕ್ಬರ್ ಅವರ ಕುರಿತು ತಮ್ಮ ನಿಲುವು ತಿಳಿಸುವಂತೆ ಸೂಚಿಸಿದೆ. ಜನವರಿ 13ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.