ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಾಂದ್ರಾದಲ್ಲಿರುವ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ವಿರುದ್ಧ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಮತ್ತು ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘಾರಟ್ ಮಾತನಾಡಿ, ರಾಣಾ ದಂಪತಿಯ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿದ್ದು, ಏ. 29ರ ಶುಕ್ರವಾರದಂದು ಮುಂದಿನ ವಿಚಾರಣೆ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಣಾ ದಂಪತಿ ಪರ ವಕೀಲ ರಿಜ್ವಾನ್ ಮರ್ಚೆಂಟ್ ಪೊಲೀಸರು ದಾಖಲಿಸಿರುವ ಪ್ರಕರಣ 'ಸುಳ್ಳು' ಎಂದು ವಾದಿಸಿದರು. ಒತ್ತಡದಲ್ಲಿ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಆಧಾರರಹಿತ ಮತ್ತು ದಂಪತಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದರು.
ದೇಶದ್ರೋಹಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 124 (ಎ) ನಂತಹ ಅತಿಶಯದ ಆರೋಪದೊಂದಿಗೆ ಪೊಲೀಸರು ಎರಡು ವಿಭಿನ್ನ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ ಅವರು, ಆದರೆ, ರಿಮಾಂಡ್ ಅರ್ಜಿಯಲ್ಲಿ ಇದನ್ನು ಉಲ್ಲೇಖಿಸಿಲ್ಲ ಮತ್ತು ನ್ಯಾಯಾಲಯದ ಮುಂದೆ ಈ ಆರೋಪವನ್ನು ವಿವರಿಸಲು ಸರ್ಕಾರಿ ವಕೀಲರು ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.
ನ್ಯಾಯಾಲಯದ ತೀರ್ಪಿನ ನಂತರ, ದಂಪತಿ ನಿರಾಶೆಯಿಂದ ಹೊರಬಂದರು. ನವನೀತ್ ರಾಣಾ ಅವರನ್ನು ಭಾಯ್ಕಳಾ ಮಹಿಳಾ ಜೈಲಿಗೆ ಮತ್ತು ರವಿ ರಾಣಾನನ್ನು ಆರ್ಥರ್ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿಗೆ ಕರೆದೊಯ್ಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಿದ್ದಾರೆ ಎಂದು ರವಿ ರಾಣಾ ಹೇಳಿಕೊಂಡಿದ್ದರು. ದಂಪತಿಗಳ ವಕೀಲರು ಸೋಮವಾರ ನ್ಯಾಯಾಲಯದ ಮುಂದೆ ಜಾಮೀನಿಗಾಗಿ ಹೊಸ ಮನವಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಶನಿವಾರ ಬೆಳಗ್ಗೆ 9ಕ್ಕೆ ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಶುಕ್ರವಾರ ಹೇಳಿದ್ದರು. ರಾಣಾ ದಂಪತಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಬೆಳಗ್ಗೆಯಿಂದಲೇ ‘ಮಾತೋಶ್ರೀ’ ಬಳಿ ಜಮಾಯಿಸಿದ್ದರು. ಮತ್ತೊಂದು ಗುಂಪು ರಾಣಾ ದಂಪತಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿತ್ತು.
ಹನುಮಾನ್ ಚಾಲೀಸಾವನ್ನು ಪಠಿಸುವ ನಿರ್ಧಾರವನ್ನು ರಾಣಾ ದಂಪತಿ ಕೈಬಿಟ್ಟ ನಂತರ ವಿವಿಧ ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಣಾ ದಂಪತಿಯನ್ನು ಖಾರ್ ಉಪನಗರದಲ್ಲಿರುವ ಅವರ ನಿವಾಸದಿಂದ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದ ಪೊಲೀಸರು, ಸಂಜೆ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.