ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ನೇತೃತ್ವದ ಸರ್ಕಾರವು ಪುದುಚೇರಿಯಲ್ಲಿ ಐದು ವರ್ಷ ಆಳ್ವಿಕೆ ನಡೆಸುವಲ್ಲಿ ವಿಫಲವಾಗಿದೆ. ಕೇಂದ್ರಾಡಳಿತ ಪ್ರದೇಶದ ಜನರು ಈ ಬಾರಿ ತಮ್ಮ ನೇತೃತ್ವದ ಮೈತ್ರಿಕೂಟಕ್ಕೆ ಮತ ಹಾಕಲಿದ್ದಾರೆ ಎಂದು ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಮುಖ್ಯಸ್ಥ ಎನ್. ರಂಗಸ್ವಾಮಿ ‘ಪ್ರಜಾವಾಣಿ’ಯ ಇ.ಟಿ.ಬಿ. ಶಿವಪ್ರಿಯನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
* ಪುದುಚೇರಿಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ನಿಮ್ಮದೇ ನೇತೃತ್ವ. ನಿಮ್ಮ ಪ‍್ರಚಾರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?
ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಪುದುಚೇರಿಗೆ ಪ್ರಬಲ ಸರ್ಕಾರ ಬೇಕು ಎಂಬುದು ಇದರಿಂದ ಅರಿವಾಗುತ್ತದೆ. ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಯಲ್ಲಿ ಎನ್.ಆರ್. ಕಾಂಗ್ರೆಸ್–ಬಿಜೆಪಿ–ಎಐಎಡಿಎಂಕೆ ಮೈತ್ರಿಕೂಟ ಗೆಲ್ಲುವುದನ್ನು ಜನರು ಬಯಸಿದ್ದಾರೆ.
* ವಿ.ನಾರಾಯಣಸ್ವಾಮಿ ಅವರ ಸರ್ಕಾರವನ್ನು ಅಧಿಕಾರಾವಧಿಯ ಕೊನೆಯಲ್ಲಿ ಪುದುಚೇರಿ ವಿಧಾನಸಭೆಯ ನಾಮನಿರ್ದೇಶಿತ ಸದಸ್ಯರ ಬೆಂಬಲದಲ್ಲಿ ಉರುಳಿಸಲಾಯಿತು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ನಿಮ್ಮ ಅಭಿಪ್ರಾಯ ಏನು?
ಸರ್ಕಾರ ಬಿದ್ದದ್ದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಇಬ್ಬರು ಸಚಿವರು ಕೆಲವು ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕಾರಣಕ್ಕೆ ಸರ್ಕಾರವು ಅಲ್ಪಮತಕ್ಕೆ ಕುಸಿಯಿತು. ಜವಾಬ್ದಾರಿಯುತ ವಿರೋಧ ಪಕ್ಷವಾಗಿದ್ದ ನಾವು ಈ ವಿಚಾರವನ್ನು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತಂದೆವು. ಸ್ವಪಕ್ಷದ ಶಾಸಕರದ್ದೇ ಬೆಂಬಲ ಇಲ್ಲವಾದ್ದರಿಂದ ಸರ್ಕಾರ ಬಿತ್ತು. ಕಾಂಗ್ರೆಸ್‌ನ ಒಳಜಗಳಕ್ಕೆ ನಮ್ಮನ್ನು ದೂರಿ ಏನು ಪ್ರಯೋಜನ?
* ಚುನಾಯಿತ ಸರ್ಕಾರವು ಕೆಲಸ ಮಾಡದಂತೆಲೆಫ್ಟಿನೆಂಟ್ ಗವರ್ನರ್ ತಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಅವರು ಹಲವು ಬಾರಿ ಹೇಳಿದ್ದಾರೆ. ನಿಮ್ಮ ನೇತೃತ್ವದ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಜನರಿಗೆ ಕೊಟ್ಟ ಭರವಸೆ ಈಡೇರಿಸುವ ವಿಶ್ವಾಸ ಇದೆಯೇ?
ನಾನು 12 ವರ್ಷ ಮುಖ್ಯಮಂತ್ರಿಯಾಗಿದ್ದೆ. ಎಂದೂ ಲೆಫ್ಟಿನೆಂಟ್ ಗವರ್ನರ್ ಜತೆಗೆ ಜಗಳ ಆಡಿಲ್ಲ. ಬಹಿರಂಗವಾಗಿ ಜಗಳ ಆಡದೆ, ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದೆ. ಕಡತಗಳನ್ನು ಲೆಫ್ಟಿನೆಂಟ್ ಗವರ್ನರ್ ಅವರೇ ಅಂಗೀಕರಿಸಬೇಕು ಎಂದು ಕಾನೂನು ಹೇಳುತ್ತದೆ. ಹಾಗಿರುವಾಗ, ಕಡತಗಳಿಗೆ ಅವರ ಸಹಿ ಪಡೆಯುವುದು ಮುಖ್ಯಮಂತ್ರಿಯ ಕರ್ತವ್ಯ ಅಲ್ಲವೇ? ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಗೆ ಮಾಡಿದ್ದೆ. ಆದರೆ, ಲೆಫ್ಟಿನೆಂಟ್ ಗವರ್ನರ್ ತಮಗೆ ತಡೆ ಒಡ್ಡಿದ್ದರು ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ. ಅವರಿಗೆ ಆಡಳಿತ ನಡೆಸಲು ಬಾರದಿದ್ದರೆ ಅದು ನಮ್ಮ ತಪ್ಪಲ್ಲ.
* ಲೋಕಸಭೆ ಚುನಾವಣೆಯಲ್ಲಿಯೂ ಎನ್.ಆರ್. ಕಾಂಗ್ರೆಸ್ ಮೈತ್ರಿಕೂಟವು ಗೆದ್ದಿಲ್ಲ. ಪುದುಚೇರಿಯ ಜನರಿಗೆ ಬಿಜೆಪಿ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯ ಇದೆ. ಈ ಬಗ್ಗೆ ಏನಂತೀರಿ?
ಲೋಕಸಭೆ ಚುನಾವಣೆಯ ಲೆಕ್ಕಾಚಾರ ಬೇರೆ. ಈಗಿನದ್ದು ವಿಧಾನಸಭೆ ಚುನಾವಣೆ. ನಾವಷ್ಟೇ ಉತ್ತಮ ಆಳ್ವಿಕೆ ನೀಡಲು ಸಾಧ್ಯವಾಗಿರುವುದರಿಂದ ಜನರು ಮತ ಹಾಕುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದು ಪುದುಚೇರಿಯ ಅಭಿವೃದ್ಧಿಗೆ ನೆರವಾಗಲಿದೆ.
* ನಿಮ್ಮ ಮೈತ್ರಿಕೂಟವು ಗೆದ್ದರೆ ಮುಖ್ಯಮಂತ್ರಿ ಯಾರು? ಚುನಾವಣೆಯ ಬಳಿಕವೇ ಮುಖ್ಯಮಂತ್ರಿಯನ್ನು ಆರಿಸಲಾಗುವುದು ಎಂದು ಬಿಜೆಪಿ ಹೇಳಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿದೆಯಲ್ಲವೇ?
ಈ ವಿಚಾರದಲ್ಲಿ ಏನಾದರೂ ಅನುಮಾನ ಇದೆಯೇ? ನನಗೆ ಹಾಗೆ ಅನಿಸುತ್ತಿಲ್ಲ. ನಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಎನ್. ಆರ್. ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಆಗಲಿದ್ದಾರೆ. ಇದುವೇ ಮೈತ್ರಿಕೂಟದ ಅತಿದೊಡ್ಡ ಪಕ್ಷ. ಮೈತ್ರಿಕೂಟದ ಎಲ್ಲ ಪಕ್ಷಗಳೂ ಇದಕ್ಕೆ ಒಪ್ಪಿವೆ, ಗೊಂದಲ ಏನೂ ಇಲ್ಲ. ಎನ್. ಆರ್. ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ನಾನೇ. ನನ್ನ ನೇತೃತ್ವದ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.