ನವದೆಹಲಿ: ವರ್ಷದ ಅಂತಿಮ ಘಟ್ಟದಲ್ಲಿದ್ದು, ನೂತನ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವ ಬೆನ್ನಲ್ಲೇ 2019ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಡಿದ್ದು ಏನನ್ನು ಎನ್ನುವ ಕುರಿತು ಗೂಗಲ್ ಟ್ರೆಂಡ್ಸ್ ಪಟ್ಟಿ ಬಿಡುಗಡೆ ಮಾಡಿದೆ.
ಭಾರತೀಯರು ಹುಡುಕಾಡಿದ ಹಾಡುಗಳ ಪೈಕಿ ಮಾರ್ವಾಡಿ ಸಿನಿಮಾದ 'ಲೇ ಫೋಟೊ ಲೇ' ಹಾಡು ಮೊದಲನೇ ಸ್ಥಾನದಲ್ಲಿದ್ದರೆ, ಹಿಮೇಶ್ ರೇಶಮಿಯಾಮತ್ತು ರಾನುಮಂಡಲ್ ಅವರ 'ತೇರಿ ಮೇರಿ ಕಹಾನಿ' ಹಾಡು ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಹುಡುಕಾಡಲ್ಪಟ್ಟಿದೆ. ಟಾಪ್ 10 ಹುಡುಕಾಟದ ಹಾಡುಗಳ ಪಟ್ಟಿಯಲ್ಲಿ ಕ್ರಮವಾಗಿ 'ತೇರಿ ಪ್ಯಾರಿ ಪ್ಯಾರಿ ಡೂ ಅಕಿಯಾನ್', 'ಕೋಕ ಕೋಲಾ ತು' ಮತ್ತು 'ಲಡ್ಕಿ ಆಂಕ್ ಮಾರೆ' ಹಾಡುಗಳು ಸ್ಥಾನ ಪಡೆದಿವೆ.
ಗೂಗಲ್ ಸರ್ಚ್ ಆನ್‌ಲೈನ್ ಹುಡುಕಾಟವನ್ನು ಆಧರಿಸಿ, ಆರ್ಟಿಕಲ್ 370 ಎಂದರೇನು? ಚುನಾವಣೋತ್ತರ ಸಮೀಕ್ಷೆ ಎಂದರೇನು? ಮತ್ತು ಕಪ್ಪು ಕುಳಿ ಎಂದರೇನು?, ಹೌಡಿ ಮೋದಿ ಎಂದರೇನು? ಮತ್ತು ಇ- ಸಿಗರೇಟು ಎಂದರೇನು? ಎಂದು ಜನರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು ಎಂದು ಗೂಗಲ್ ಟ್ರೆಂಡ್ಸ್‌ನಲ್ಲಿ ತಿಳಿದುಬಂದಿದೆ.
ಅತಿಹೆಚ್ಚು ಹುಡುಕಾಡಿದ ಸಿನಿಮಾಗಳು ಯಾವುವು?
2019ರ ಗೂಗಲ್ ಸರ್ಚ್‌ನಲ್ಲಿ ಭಾರತೀಯರು ಶಾಹಿದ್ ಕಪೂರ್ ನಟನೆಯ 'ಕಬೀರ್ ಸಿಂಗ್' ಸಿನಿಮಾವನ್ನು ಹುಡುಕಾಡಿದ್ದಾರೆ. ಬಳಿಕ ಮಾರ್ವೆಲ್ ಅವರ 'ಅವೆಂಜರ್ ಎಂಡ್‌ಗೇಮ್', ಜಾಕ್ವಿನ್ ಫೊನಿಕ್ಸ್ ನಟನೆಯ 'ಜೋಕರ್', 'ಮಿಷನ್ ಮಂಗಲ್', 'ವಾರ್' ಮತ್ತು 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾಗಳು ಟಾಪ್ 10 ಹುಡುಕಾಟದ ಪಟ್ಟಿಯಲ್ಲಿವೆ.
ಅತಿಹೆಚ್ಚು ಹುಡುಕಾಡಿದ ಸುದ್ದಿಗಳು
ಗೂಗಲ್‌ನಲ್ಲಿ ಈ ವರ್ಷ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅತಿಹೆಚ್ಚು ಜನರು ತಡಕಾಡಿದ್ದಾರೆ. ಎರಡನೆಯ ಸ್ಥಾನದಲ್ಲಿ ಚಂದ್ರಯಾನ-2, ಆರ್ಟಿಕಲ್ 370, ಪ್ರಧಾನ ಮಂತ್ರಿ ಕಿಸಾನ್ ಯೋಜನಾ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಅತಿಹೆಚ್ಚು ಜನರು ಹುಡುಕಾಡಿದ್ದಾರೆ.
ಅತಿಹೆಚ್ಚು ಹುಡುಕಾಡಿದ ವ್ಯಕ್ತಿಗಳಿವರು
ಪಾಕ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ನಡೆಸುವ ವೇಳೆಯಲ್ಲಿ ಪಾಕ್ ವಶದಲ್ಲಿದ್ದುಕೊಂಡು ಹಿಂತಿರುಗಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಅತಿಹೆಚ್ಚು ಜನರು ಹುಡುಕಾಡಿದ್ದಾರೆ. ನಂತರದ ಸ್ಥಾನಗಳಲ್ಲಿ ಲತಾ ಮಂಗೇಷ್ಕರ್, ಯುವರಾಜ್ ಸಿಂಗ್, ಆನಂದ್ ಕುಮಾರ್ ಮತ್ತು ವಿಕ್ಕಿ ಕೌಶಾಲ್ ಅವರನ್ನು ಹುಡುಕಾಡಿದ್ದಾರೆ.
ಹೇಗೆ ಎನ್ನುವ ಕುರಿತ ಹುಡುಕಾಟದಲ್ಲಿ ಮತ ಚಲಾಯಿಸುವುದು ಹೇಗೆ? ಆಧಾರ್‌ಗೆ ಪಾನ್ ಜೋಡಿಸುವುದು ಹೇಗೆ? ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕುವುದು ಹೇಗೆ?. ನೀಟ್ ಫಲಿತಾಂಶ ಹುಡುಕುವುದು ಹೇಗೆ? ಮತ್ತು ಟ್ರಾಯ್ ಪ್ರಕಾರ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಎಂದು ಜನರು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.