ಲಖನೌ: ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದ ತಾನು ನಿರ್ದೇಶಕ ಆಗಿದ್ದ ಶಿಕ್ಷಣ ಸಂಸ್ಥೆಯ ಕಾನೂನು ವಿದ್ಯಾರ್ಥಿನಿ, ಸಂತ್ರಸ್ತೆಗೆ ನೂರಾರು ಸಂದೇಶಗಳನ್ನು ಕಳುಹಿಸಿರುವುದು ತನಿಖೆಯಿಂದ ಗೊತ್ತಾಗಿದೆ.
‘ಲೈಂಗಿಕ ಶೋಷಣೆ’ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಚಿನ್ಮಯಾನಂದ ಈಗ ಜೈಲಿನಲ್ಲಿದ್ದಾರೆ. ‘ಲೈಂಗಿಕ ದೃಶ್ಯ’ಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ ಆರೋಪದಲ್ಲಿ ಸಂತ್ರಸ್ತೆ, ಇತರ ಮೂವರನ್ನು ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ‘ಚಿನ್ಮಯಾನಂದ ಸಂತ್ರಸ್ತೆಗೆ ಅಸಂಖ್ಯ ಫೋನ್ ಕರೆಗಳನ್ನು ಮಾಡಿದ್ದಾರೆ. ಕೆಲವೇ ತಿಂಗಳ ಅವಧಿಯಲ್ಲಿ ಸಂತ್ರಸ್ತೆ ಮತ್ತು ಅವರ ನಡುವೆ ಅಸಂಖ್ಯ ಸಂದೇಶಗಳೂ ವಿನಿಮಯವಾಗಿವೆ. ಹಲವು ಬಾರಿ ಪರಸ್ಪರ ಮಾತನಾಡಿದ್ದಾರೆ’.
ಸಂತ್ರಸ್ತೆಯು ಹಾಸ್ಟೆಲ್ ತೆರವುಗೊಳಿಸಿದ ನಂತರ ಚಿನ್ಮಯಾನಂದ ಸಂದೇಶ, ಕರೆದಾಖಲೆಗಳನ್ನು ಅಳಿಸಿದ್ದರು. ಆದರೆ, ವಿಶೇಷ ತನಿಖಾ ತಂಡವು ಪರಿಣಿತರ ನೆರವನ್ನು ಪಡೆದು ಈ ಸಂದೇಶಗಳ ದಾಖಲೆಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮೂಲಗಳ ಪ್ರಕಾರ, ಸಂತ್ರಸ್ತೆಗೆ ಚಿನ್ಮಯಾನಂದ ಅವರೇ ದ್ವಿಚಕ್ರ ವಾಹನ ಕೊಡಿಸಿದ್ದರು. ಸಂಸ್ಥೆಯೇ ಶುಲ್ಕವನ್ನು ಭರಿಸಿತ್ತು. ಅಲ್ಲದೆ, ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ ವಿದ್ಯಾರ್ಥಿನಿಲಯದಲ್ಲಿ ಉಳಿಯಲು ಅವಕಾಶವನ್ನು ಕಲ್ಪಿಸಲಾಗಿತ್ತು. ಚಿನ್ಮಯಾನಂದ ಅವರ ನಿರ್ದೇಶನದ ಮೇರೆಗೇ ಸಂತ್ರಸ್ತೆಗೆಪ್ರವೇಶವನ್ನು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
‘ಲೈಂಗಿಕ ಶೋಷಣೆ’ಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದ ಕಾನೂನು ವಿದ್ಯಾರ್ಥಿನಿ, ತದನಂತರ ತನ್ನ ಆರೋಪದ ಸಮರ್ಥನೆಯಾಗಿ ಸುಮಾರು 40 ವಿಡಿಯೊಗಳನ್ನೂ ಪೊಲೀಸರಿಗೆ ನೀಡಿದ್ದರು.
ಎಸ್‌ಐಟಿ ಕಳೆದ ತಿಂಗಳು ಚಿನ್ಮಯಾನಂದ ಅವರನ್ನು ಬಂಧಿಸಿತ್ತು. ಅವರ ವಿರುದ್ಧ ಅತ್ಯಾಚಾರ ಪ್ರಕರಣದ ಬದಲಿಗೆ ಶಿಕ್ಷೆಯ ಸ್ವರೂಪ ಕಡಿಮೆ ಇರುವ ‘ಅಧಿಕಾರ ದುರ್ಬಳಕೆ ಮಾಡಿಕೊಂಡು ‘ಲೈಂಗಿಕ ಶೋಷಣೆ’ ಮಾಡಿದ ಆರೋಪವನ್ನು ಹೊರಿಸಲಾಗಿತ್ತು.
ಇನ್ನೊಂದೆಡೆ, ಸಂತ್ರಸ್ತೆ ಮತ್ತು ಇತರೆ ಮೂವರು ಗೆಳೆಯರನ್ನು ಎಸ್‌ಐಟಿ ಅಧಿಕಾರಿಗಳು, ‘ಲೈಂಗಿಕ ದೃಶ್ಯ’ಗಳನ್ನು ಬಹಿರಂಗಪಡಿಸುವ ಬೆದರಿಕೆಯೊಡ್ಡಿ ಸ್ವಾಮೀಜಿಯಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.