ನವದೆಹಲಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲ್ಲಕಲ್ ಚರ್ಚ್ ಜವಾಬ್ದಾರಿಯನ್ನು ಫಾ.ಮ್ಯಾಥ್ಯೂ ಕೊಕ್ಕಂಡ ಅವರಿಗೆ ಹಸ್ತಾಂತರಿಸಿದ್ದಾರೆ.
ತನಿಖಾ ತಂಡದ ಮುಂದೆ ಇದೇ 19ರಂದು ಹಾಜರಾಗುವ ಸಲುವಾಗಿ ಫ್ರಾಂಕೋ ತಮ್ಮ ಸ್ಥಾನದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ್ದಾರೆ.
ನಾನು ಎಲ್ಲವನ್ನೂ ದೇವರಿಗೆ ಬಿಟ್ಟು, ತನಿಖಾ ತಂಡಕ್ಕೆ ಸಹಕರಿಸಿಫಲಿತಾಂಶಕ್ಕಾಗಿ ಕಾಯುತ್ತೇನೆ.ನನ್ನ ಅನುಪಸ್ಥಿತಿಯಲ್ಲಿ ಮ್ಯಾಥ್ಯೂ ಕೊಕ್ಕಂಡಅವರು ಇಲ್ಲಿನ ಜವಾಬ್ದಾರಿ ವಹಿಸಲಿದ್ದು, ಚರ್ಚ್ ನ ಕಾರ್ಯಗಳು ಯಥಾಪ್ರಕಾರ ಮುಂದುವರಿಯಲಿದೆ ಎಂದು ಫ್ರಾಂಕೋ ಹೇಳಿದ್ದಾರೆ.
ಚರ್ಚ್ ನ ಉಸ್ತುವಾರಿಯನ್ನು ಫಾ.ಬಿಬಿನ್ ಓಟ್ಟಕ್ಕುನ್ನೆಲ್, ಫಾ. ಜೋಸೆಫ್ ತೆಂಕ್ಕುಂಕಾಟ್ಟಿಲ್, ಫಾ.ಸುಬಿನ್ ತೆಕ್ಕಾಡತ್ತ್ ಎಂಬವರಿಗೆ ನೀಡಲಾಗಿದೆ.ತನಿಖೆ ಮುಗಿಯುವವರೆಗೆ ಈ ಬದಲಾವಣೆ ಮಾಡಲಾಗಿದೆ.ನನಗಾಗಿ ಮತ್ತು ನನ್ನ ಮೇಲೆ ಆರೋಪ ಮಾಡಿದವರಿಗಾಗಿ ಪ್ರಾರ್ಥಿಸಿ ಎಂದು ಫ್ರಾಂಕೋ ತಮ್ಮ ಸುತ್ತೋಲೆಯಲ್ಲಿ ಬರೆದಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ತನ್ನ ಮೇಲಿರುವ ಪ್ರಕರಣದಲ್ಲಿ ಪೊಲೀಸರು ಸಿದ್ಧಪಡಿಸಿದ ವರದಿಯಲ್ಲಿರುವ ಸಾಕ್ಷ್ಯಗಳಲ್ಲಿ ವ್ಯತ್ಯಾಸವಿದೆ. ನನಗೂ, ನನ್ನ ಮೇಲೆ ಆರೋಪ ಹೊರಿಸಿದವರಿಗೆ, ಜತೆಗೆ ನಿಂತವರಿಗಾಗಿ ನೀವು ಪ್ರಾರ್ಥಿಸಬೇಕು. ದೇವರ ಕೃಪೆಯಿಂದ ಸತ್ಯ ಹೊರಗೆ ಬರಲಿದೆ.
ಏನಿದು ಪ್ರಕರಣ?
2014ರಲ್ಲಿ ಬಿಷಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸನ್ಯಾಸಿನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಸನ್ಯಾಸಿನಿ ವೆಟಿಕನ್‍ಗೆ ಪತ್ರ ಬರೆದು ಬಿಷಪ್‌ನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದರು.ಬಿಷಪ್ ಈ ಪ್ರಕರಣವನ್ನು ಮುಚ್ಚಿಹಾಕಲು ರಾಜಕೀಯ ಮತ್ತು ಹಣದ ಬಲ ಉಪಯೋಗಿಸುತ್ತಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. ಆದರೆ ಈ ಆರೋಪಗಳೆಲ್ಲವೂ ಸುಳ್ಳು ಎಂದು ಬಿಷಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.