ತಿರುವನಂತಪುರ: ಮಲಯಾಳಂ ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
2016ರಲ್ಲಿ ಸಿದ್ದಿಕ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ನೀಡಿರುವ ದೂರನ್ನು ಆಧರಿಸಿ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2016ರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿರುವುದರಿಂದ, ಐಪಿಸಿ ಅಡಿಯಲ್ಲೇ ಪ್ರಕರಣ ದಾಖಲಿಸಲಾಗಿದೆ.
ಮಾಲಿವುಡ್‌ನ ಹಲವು ನಿರ್ದೇಶಕರು ಮತ್ತು ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕುರಿತಾದ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಬಹಿರಂಗವಾದ ಬಳಿಕ ಚಿತ್ರರಂಗದ ಹೈ ಪ್ರೊಫೈಲ್ ವ್ಯಕ್ತಿ ವಿರುದ್ಧ ದಾಖಲಾದ ಎರಡನೇ ಎಫ್‌ಐಆರ್ ಇದಾಗಿದೆ. 2009ರಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ನಟಿಯೊಬ್ಬರು ನೀಡಿದ ದೂರಿನ ಮೇರೆಗೆ ನಿರ್ದೇಶಕ ರಂಜಿತ್ ವಿರುದ್ಧ ಐಪಿಸಿ ಸೆಕ್ಷನ್ 354ರ (ಮಹಿಳೆಯರ ಮೇಲಿನ ದೌರ್ಜನ್ಯ) ಅಡಿ ಮೊದಲ ಪ್ರಕರಣ ದಾಖಲಾಗಿತ್ತು.
2009ರಲ್ಲಿ ಪಲೇರಿ ಮಾಣಿಕ್ಯಂ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ್ದ ನಿರ್ದೇಶಕರು, ಲೈಂಗಿಕ ಉದ್ದೇಶದಿಂದ ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ನಟಿ ಆರೋಪಿಸಿದ್ದರು.
ಆರೋಪದ ಬೆನ್ನಲ್ಲೇ ರಂಜಿತ್, ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದಿಕ್ ಸಹ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2017ರಲ್ಲಿ ನಟ ದಿಲೀಪ್ ಹೆಸರು ಕೇಳಿಬಂದಿದ್ದ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ಕುರಿತಂತೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿತ್ತು. 2019ರಲ್ಲೇ ಸಮಿತಿಯು ವರದಿಯನ್ನು ಸಲ್ಲಿಕೆ ಮಾಡಿದ್ದು, ಆ ವರದಿಯು ಇತ್ತೀಚೆಗೆ ಬಹಿರಂಗಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.