ADVERTISEMENT

ಪುಣೆ: ಮಸೀದಿಯಲ್ಲಿ 44ನೇ ವರ್ಷದ ಗಣೇಶೋತ್ಸವ...

ಪಿಟಿಐ
Published 17 ಸೆಪ್ಟೆಂಬರ್ 2024, 15:57 IST
Last Updated 17 ಸೆಪ್ಟೆಂಬರ್ 2024, 15:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಿಟಿಐ

ಪುಣೆ : ‘ಅದು 1961ನೇ ಇಸವಿ. ಭಾರಿ ಮಳೆ ಸುರಿದಿತ್ತು. ಅದು ಗಣೇಶ ಚರ್ತುರ್ಥಿಯ ಸಂದರ್ಭವಾಗಿತ್ತು. ಮಸೀದಿಯೊಳಗೆ ಗಣಪತಿ ಮೂರ್ತಿ ಇರಿಸಲು, ಸುತ್ತಮುತ್ತಲ ಹಿಂದೂ ಸಮುದಾಯದವರಿಗೆ ಮುಸ್ಲಿಮರು ಆಮಂತ್ರಣ ನೀಡಿದರು. ಅಲ್ಲಿಂದ ಪ್ರತಿ ವರ್ಷವೂ ಮಸೀದಿಯಲ್ಲಿ ಗಣೇಶ ಮೂರ್ತಿ ಇರಿಸುವ ಆಚರಣೆ ಆರಂಭವಾಯಿತು...’

ADVERTISEMENT

ಹೀಗೆಂದವರು ಗಣೇಶ ಮಂಡಲದ ಮಾಜಿ ಅಧ್ಯಕ್ಷ ಅಶೋಲ್ ‍ಪಾಟೀಲ್‌. ಪಶ್ಚಿಮ ಮಹಾರಾಷ್ಟ್ರದ ಸಂಗಲಿ ನಗರದಿಂದ 32 ಕೀ.ಮೀ ದೂರ ಇರುವ ಗೋಟ್‌ಖಿಂಡಿ ಗ್ರಾಮದಲ್ಲಿ ಈ ಸೌಹಾರ್ದದ ಹಬ್ಬ ನಡೆಯುತ್ತಿದೆ.

‘ನಡುವೆ ಕೆಲವು ವರ್ಷಗಳ ಕಾಲ ಈ ಆಚರಣೆ ನಿಂತೇ ಹೋಗಿತ್ತು. ಆದರೆ, 1980ರಲ್ಲಿ ಹೊಸ ಗಣೇಶ ಮಂಡಲವನ್ನು ರಚಿಸಿಕೊಳ್ಳಲಾಯಿತು. ಆನಂತರದಲ್ಲಿ ಒಂದು ವರ್ಷವೂ ಈ ಆಚರಣೆ ನಿಂತಿಲ್ಲ. ಕಳೆದ 44 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ’ ಎಂದು ಅಶೋಕ್‌ ವಿವರಿಸಿದರು.

‘ಪ್ರತಿ ವರ್ಷವೂ ಹಿಂದೂ ಹಾಗೂ ಮುಸ್ಲಿಮರು ಸೇರಿ ಗಣೇಶ ಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸುತ್ತೇವೆ. ಮಸೀದಿಯಲ್ಲಿ ಹೀಗೆ ಗಣೇಶ ಹಬ್ಬ ಆಚರಿಸುವುದು ಎರಡೂ ಧರ್ಮಗಳ ಮಧ್ಯದ ಸೌಹಾರ್ದದ ಸಂತೇಕ’ ಎಂದು ಗಣೇಶ ಮಂಡಲದ ಅಧ್ಯಕ್ಷ ಇಲಾಹಿ ಪಠಾಣ್‌ ಅಭಿಪ್ರಾಯಪಟ್ಟರು.

‘ಗೋಟ್‌ಖಿಂಡಿ ಗ್ರಾಮದಲ್ಲಿ ಗಣೇಶ ಹಬ್ಬ ಮಾತ್ರವಲ್ಲ ಮೊಹರಂ, ದೀಪಾವಳಿ, ಈದ್‌... ಹೀಗೆ ಎಲ್ಲ ಹಬ್ಬಗಳನ್ನು ಒಟ್ಟೊಟ್ಟಿಗೆ ಆಚರಿಸುತ್ತೇವೆ’ ಎಂದು ಮಂಡಲದ ಸದಸ್ಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.