ಮುಂಬೈ: ನೇರ ನುಡಿ, ವ್ಯಾವಹಾರದಲ್ಲಿ ಕಠಿಣ ನಿರ್ಧಾರ, ಉದ್ಯೋಗಿಗಳು ಹಾಗೂ ಸಮಾಜದ ಕುರಿತು ಔದಾರ್ಯ ಹಾಗೂ ಯುವಜನತೆಯ ಪಾಲಿನ ಸ್ಫೂರ್ತಿಯ ಚೇತನರಾಗಿದ್ದ ರತನ್ ಟಾಟಾ ಅವರು, ಉದ್ಯಮ ಕ್ಷೇತ್ರಗಳಲ್ಲಿ ಮಾತ್ರವಲ್ಲ, ತಮ್ಮ ಪಾರ್ಸಿ ಸಮುದಾಯದಲ್ಲೂ ಹೆಚ್ಚು ಪ್ರಭಾವಿ ವ್ಯಕ್ತಿ.
86 ವರ್ಷದ ರತನ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಅವರ ಅಂತಿಮ ದರ್ಶನಕ್ಕೆ ಗುರುವಾರ ಸಂಜೆ 4ರವರೆಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ವರ್ಲಿಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಟಾಟಾ ಟ್ರಸ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ರಾತ್ರಿ ರತನ್ ಅವರ ನಿಧನವಾಯಿತು. ಗುರುವಾರ ಬೆಳಿಗ್ಗೆ ಪಾರ್ಥೀವ ಶರೀರವನ್ನು ಶ್ವೇತ ವರ್ಣದ ಹೂವುಗಳಿಂದ ಆಲಂಕೃತ ವಾಹನದಲ್ಲಿ ಅವರ ಮನೆ ಕೊಲಾಬಾಗೆ ಕರೆತರಲಾಯಿತು. ಮೃತದೇಹದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಲಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸೇರಿದಂತೆ ಹಲವು ಗಣ್ಯರು ರತನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ವರ್ಲಿಯಲ್ಲಿರುವ ರುದ್ರಭೂಮಿಯಲ್ಲಿ ರತನ್ ಅವರ ಅಂತ್ಯಸಂಸ್ಕಾರಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಆದರೆ ಪಾರ್ಸಿ ಅವರ ಸಂಪ್ರದಾಯದ ಬದಲು, ರುದ್ರಭೂಮಿಯಲ್ಲಿ ದಹನ ಕ್ರಿಯೆ ಮೂಲಕ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಪಾರ್ಸಿಗಳು ಝೋರಾಸ್ಟ್ರಿಯನ್ ಧರ್ಮವನ್ನು ಅನುಸರಿಸುತ್ತಾರೆ. ಇವರಲ್ಲಿ ಯಾರಾದರೂ ಮೃತಪಟ್ಟರೆ ದೋಖ್ಮೆನಾಶಿನಿ ಎಂದು ಕರೆಯಲಾಗುವ ‘ಟವರ್ ಆಫ್ ಸೈಲೆನ್ಸ್’ (ಮೌನ ಗೋಪುರ) ಎಂಬ ವಿಶಿಷ್ಟ ರೀತಿಯ ಅಂತ್ಯಕ್ರಿಯೆ ವಿಧಾನ ರೂಢಿಯಲ್ಲಿದೆ. ಇದರಲ್ಲಿ ದೇಹವನ್ನು ಹೂಳುವ ಅಥವಾ ಸುಡುವ ಪದ್ಧತಿ ಇಲ್ಲ. ಬದಲಾಗಿ, ಶವವನ್ನು ಟವರ್ ಆಫ್ ಸೈಲೆನ್ಸ್ ಮೇಲೆ ಇಡಲಾಗುತ್ತದೆ. ಬೆಂಕಿ ಹಾಗೂ ಭೂಮಿ ಎರಡೂ ಪವಿತ್ರವಾದ ಕಾರಣ, ಅದು ಕಲುಷಿತಗೊಳ್ಳಬಾರದು ಎಂಬುದು ಪಾರ್ಸಿಗಳ ನಂಬಿಕೆ. ಅಲ್ಲಿ ದೇಹವನ್ನು ಮೊದಲು ಪಕ್ಷಿಗಳು ತಿನ್ನುತ್ತವೆ. ಮೂಳೆಗಳು ಈ ಗೋಪುರದೊಳಗಿಂದ ಅಲ್ಲಿನ ಬಾವಿಯೊಳಗೆ ಬೀಳುತ್ತದೆ. ಇದು ವ್ಯಕ್ತಿಯೊಬ್ಬ ಮಾಡಬಹುದಾದ ಅಂತಿಮ ದಾನವಾಗಿದೆ ಎಂಬುದು ಪಾರ್ಸಿಗಳ ನಂಬಿಕೆ.
ಆದರೆ ಶವವನ್ನು ತಿನ್ನುವ ರಣಹದ್ದುಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಪಾರ್ಸಿ ಸಂಪ್ರದಾಯದಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ. ಸೌರ ಕೇಂದ್ರಗಳ ಜತೆಗೆ, ವಿದ್ಯುತ್ ಚಿತಾಗಾರವನ್ನು ಈಗ ಬಹುತೇಕರು ಬಳಸುತ್ತಿದ್ದಾರೆ.
2024ರ ವರದಿಯ ಪ್ರಕಾರ ಮುಂಬೈನಲ್ಲಿರುವ ರುದ್ರಭೂಮಿಯಲ್ಲಿ 2024ರ ಆರಂಭದಲ್ಲಿ ಶೇ 7ರಿಂದ 8 ಅಂತ್ಯಕ್ರಿಯೆಗಳಷ್ಟೇ ಚಿತಾಗಾರದಲ್ಲಿ ನಡೆಯುತ್ತಿದ್ದವು. ಇದೀಗ ಇದರ ಪ್ರಮಾಣ ಶೇ 15ರಿಂದ 20ಕ್ಕೆ ಏರಿಕೆಯಾಗಿದೆ. ಬಹಳಷ್ಟು ಸಾಂಪ್ರದಾಯಿಕ ಪಾರ್ಸಿಗಳು ಸುಡುವುದನ್ನು ವಿರೋಧಿಸುತ್ತಾರೆ. 2022ರಲ್ಲಿ ಸೈರಸ್ ಮಿಸ್ತ್ರಿ ಹಾಗೂ ಪಾರ್ಸಿ ಸಮುದಾಯದ ಇತರರ ಅಂತ್ಯಸಂಸ್ಕಾರವೂ ವರ್ಲಿಯ ರುದ್ರಭೂಮಿಯಲ್ಲಿ ನಡೆದಿದೆ.
ಸದ್ಯ ಕೊಲಾಬಾದಲ್ಲಿರುವ ರತನ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ವರ್ಲಿ ರುದ್ರಭೂಮಿಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಮಹಾರಾಷ್ಟ್ರ ಸರ್ಕಾರವು ಗುರುವಾರ ಶೋಕಾಚರಣೆ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.