ಮುಂಬೈ: ದೇಶದ ಪ್ರಮುಖ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷ ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮುಂಬೈನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವರದಿಗಳು ಹೇಳಿವೆ.
ವಯೋ ಸಹಜಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟಾಟಾ (86) ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ನಿರಂತರ ತಪಾಸಣೆ ನಡೆಯುತ್ತಿದೆ ಎಂದೆನ್ನಲಾಗಿದೆ.
ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆಯಲು ಟಾಟಾ ಕಂಪನಿಯ ಪ್ರತಿನಿಧಿಯನ್ನು ಸಂಪರ್ಕಿಸಲಾಯಿತು. ಆದರೆ ಅವರು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ತಮ್ಮ ಆರೋಗ್ಯದ ಕುರಿತು ತಪ್ಪು ಮಾಹಿತಿ ಹರಡಬೇಡಿ ಎಂದು ಇತ್ತೀಚೆಗೆ ರತನ್ ಟಾಟಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ‘ನಾನು ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವುದು ಸುಳ್ಳು. ವಯೋ ಸಂಬಂಧ ವೈದ್ಯಕೀಯ ತಪಾಸಣೆಗೆ ಒಳಗಾಗಿರುವೆ. ನಾನು ಆರೋಗ್ಯವಾಗಿದ್ದೇನೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿ ಹರಡಬೇಡಿ’ ಎಂದಿದ್ದರು.
ರಕ್ತದೊತ್ತಡ ಕಡಿಮೆಯಾದ ಕಾರಣ ರತನ್ ಟಾಟಾ ಅವರನ್ನು ಸೋಮವಾರ ಮುಂಜಾನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.