ನವದೆಹಲಿ: ಅವರು ಜಗತ್ತಿನ ಅತ್ಯಂತ ಪ್ರಭಾವಿ ಉದ್ಯಮಿಗಳ ಪೈಕಿ ಒಬ್ಬರಾಗಿದ್ದರು. ಹೀಗಿದ್ದರೂ, ಜಗತ್ತಿನ ಶತಕೋಟ್ಯಧೀಶರ ಪಟ್ಟಿಯಲ್ಲಿ ಅವರ ಹೆಸರು ಒಮ್ಮೆಯೂ ಕಾಣಿಸಿಕೊಳ್ಳಲಿಲ್ಲ. ಆರು ಭೂಖಂಡಗಳ 100ಕ್ಕೂ ಹೆಚ್ಚಿನ ದೇಶಗಳಲ್ಲಿ ಕಾರ್ಯಾಚರಣೆ ಹೊಂದಿರುವ 30ಕ್ಕೂ ಹೆಚ್ಚು ಕಂಪನಿಗಳು ಅವರ ನಿಯಂತ್ರಣದಲ್ಲಿದ್ದವು. ಆದರೆ ಅವರು ಎಂದಿಗೂ ಆಡಂಬರದ ಜೀವನ ನಡೆಸಲಿಲ್ಲ.
ಮುಂಬೈನ ಆಸ್ಪತ್ರೆಯೊಂದರಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದ ಉದ್ಯಮಿ ರತನ್ ಟಾಟಾ ಅವರ ಬದುಕನ್ನು ವಿವರಿಸುವ ಮಾತುಗಳು ಇವು. ರತನ್ ಟಾಟಾ ಅವರು ಬಹುಶಃ ಬಹಳ ವಿಶಿಷ್ಟವಾದ ಸ್ಥಾನವೊಂದನ್ನು ಸಂಪಾದಿಸಿದ್ದರು. ಘನತೆ ಹಾಗೂ ಪ್ರಾಮಾಣಿಕತೆಯ ಮೂಲಕ ಖ್ಯಾತಿ ಸಂಪಾದಿಸಿದರು, ನಡೆದಾಡುವ ಸಂತ ಎಂಬ ಪ್ರೀತಿಗೆ ಪಾತ್ರರಾಗಿದ್ದರು. ಇದೇ ಹೊತ್ತಿನಲ್ಲಿ ಅವರು ಕಾರ್ಪೊರೇಟ್ ಲೋಕದ ದಿಗ್ಗಜನ ಸ್ಥಾನವನ್ನೂ ಅಲಂಕರಿಸಿದ್ದರು.
ನ್ಯೂಯಾರ್ಕ್‌ನ ಕಾನೆಲ್ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪದಲ್ಲಿ ಬಿಎಸ್ ಪದವಿಯನ್ನು ಪಡೆದ ನಂತರ 1962ರಲ್ಲಿ ಅವರು ಕುಟುಂಬದ ಮಾಲೀಕತ್ವದಲ್ಲಿದ್ದ ಟಾಟಾ ಕಂಪನಿಯೊಂದನ್ನು ಸೇರಿದರು. ಆರಂಭದಲ್ಲಿ ಅವರು ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿ ಅನುಭವ ಸಂಪಾದಿಸಿದರು. ಟಾಟಾ ಸಮೂಹದ ಹಲವು ಉದ್ದಿಮೆಗಳಲ್ಲಿ ಅನುಭವ ಸಂಪಾದಿಸಿ, ಸಮೂಹಕ್ಕೆ ಸೇರಿದ ನ್ಯಾಷನಲ್ ರೇಡಿಯೊ ಆ್ಯಂಡ್ ಎಲೆಕ್ಟ್ರಾನಿಕ್ಸ್ ಕಂಪನಿಯ ಆಡಳಿತ ಮಂಡಳಿಗೆ 1971ರಲ್ಲಿ ನಿರ್ದೇಶಕರಾದರು.
ಇದಾದ ಒಂದು ದಶಕದ ನಂತರ ಅವರು ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾದರು. 1991ರಲ್ಲಿ ಜೆಆರ್‌ಡಿ ಟಾಟಾ ಅವರಿಂದ ಟಾಟಾ ಸಮೂಹದ ಅಧ್ಯಕ್ಷ ಹೊಣೆಯನ್ನು ಪಡೆದುಕೊಂಡರು.
ಭಾರತವು ತನ್ನ ಅರ್ಥ ವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತವಾಗಿಸಿದ್ದು ಕೂಡ ಇದೇ ವರ್ಷದಲ್ಲಿ. ರತನ್ ಟಾಟಾ ಅವರು ಸಮೂಹವನ್ನು ಬಹಳ ಬೇಗನೆ ಜಾಗತಿಕ ಮಟ್ಟದ ಪ್ರಬಲ ಶಕ್ತಿಯನ್ನಾಗಿ ಬೆಳೆಸಿದರು. ಟಾಟಾ ಸಮೂಹದ ವಹಿವಾಟುಗಳು ಇಂದು ಉಪ್ಪು ತಯಾರಿಕೆಯಿಂದ ಆರಂಭಿಸಿ ಉಕ್ಕು ತಯಾರಿಕೆಯವರೆಗೆ, ಕಾರುಗಳ ತಯಾರಿಕೆಯಿಂದ ಆರಂಭಿಸಿ ಸಾಫ್ಟ್‌ವೇರ್ ಸೇವೆಗಳವರೆಗೆ, ವಿದ್ಯುತ್ ಉತ್ಪಾದನೆಯಿಂದ ಆರಂಭಿಸಿ ವಿಮಾನಯಾನ ಸೇವೆಗಳವರೆಗೆ ಚಾಚಿಕೊಂಡಿವೆ.
ಸಮೂಹದ ಮಾಲೀಕತ್ವದಲ್ಲಿ ಪ್ರಮುಖ ಪಾಲು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ರತನ್ ಟಾಟಾ ಅವರು ಎರಡು ದಶಕಕ್ಕೂ ಹೆಚ್ಚು ಅವಧಿಗೆ ಕರ್ತವ್ಯ ನಿರ್ವಹಿಸಿದ್ದಾರೆ.
ದೇಶದ ಪ್ರಭಾವಿ ಉದ್ಯಮಿಗಳ ಪೈಕಿ ಒಬ್ಬರಾಗಿದ್ದ ರತನ್ ಟಾಟಾ ಅವರು ಮಾನವೀಯ ನೆಲೆಯಲ್ಲಿನ ಚಟುವಟಿಕೆಗಳಿಂದಲೂ ಹೆಸರು ಸಂಪಾದಿಸಿದ್ದಾರೆ. ಅವರು ಬಹಳ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ದಾನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 1970ರ ದಶಕದ ಆರಂಭದಲ್ಲಿ ಅವರು ದಿ ಆಗಾ ಖಾನ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಯೋಜನೆಗೆ ಚಾಲನೆ ನೀಡಿದರು. ಆ ಮೂಲಕ, ದೇಶದ ಪ್ರಮುಖ ಆರೋಗ್ಯಸೇವಾ ಸಂಸ್ಥೆಯೊಂದಕ್ಕೆ ಅಡಿಪಾಯ ಹಾಕಿಕೊಟ್ಟರು.
1991ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕ ಆದ ನಂತರದಲ್ಲಿ ಅವರ ದಾನ ಕಾರ್ಯಗಳು ಹೊಸ ವೇಗ ಪಡೆದುಕೊಂಡವು. ಜೆಮ್‌ಸೆಟ್ಜಿ ಟಾಟಾ ಅವರು ಸ್ಥಾಪಿಸಿದ ಟಾಟಾ ಟ್ರಸ್ಟ್‌ಗಳ ಮೂಲಕ ರತನ್ ಟಾಟಾ ಅವರು ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸಿನ ನೆರವು ಒದಗಿಸಿದರು.
ಇಂತಹ ಸಾಧನೆ, ದಾನ ಕಾರ್ಯಗಳ ನಡುವೆ ರತನ್ ಟಾಟಾ ಅವರನ್ನು ವಿವಾದಗಳೂ ಸುತ್ತಿಕೊಂಡಿದ್ದವು. 2008ರಲ್ಲಿ ನಡೆದ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಟಾಟಾ ಸಮೂಹದ ಮೇಲೆ ನೇರವಾದ ದೋಷಾರೋಪ ಇಲ್ಲವಾಗಿತ್ತಾದರೂ, ಲಾಬಿ ನಡೆಸುವ ವ್ಯಕ್ತಿ ನೀರಾ ರಾಡಿಯಾ ಜೊತೆ ರತನ್ ಟಾಟಾ ಅವರು ನಡೆಸಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯ ವಿವರಗಳು ಬಹಿರಂಗವಾಗಿ, ರತನ್ ಟಾಟಾ ಅವರನ್ನು ವಿವಾದವೊಂದು ಸುತ್ತಿಕೊಂಡಿತ್ತು. ಆದರೆ ರತನ್ ಟಾಟಾ ಅವರು ತಪ್ಪು ಮಾಡಿದ್ದಾರೆ ಎಂಬ ದೋಷಾರೋಪ ಇರಲಿಲ್ಲ.
ರತನ್ ಟಾಟಾ ಅವರು 2012ರಲ್ಲಿ ಟಾಟಾ ಸನ್ಸ್‌ನ ಅಧಿಕಾರವನ್ನು ಸೈರಸ್ ಮಿಸ್ತ್ರಿ ಅವರಿಗೆ ಬಿಟ್ಟುಕೊಟ್ಟರು. ಆದರೆ ಟಾಟಾ ಕುಟುಂಬಕ್ಕೆ ಸೇರಿಲ್ಲದ ಮಿಸ್ತ್ರಿ ಅವರ ಕಾರ್ಯಶೈಲಿಯ ಬಗ್ಗೆ ಮಾಲೀಕರಿಗೆ ಅಸಮಾಧಾನ ಇತ್ತು. ಇದರ ಪರಿಣಾಮವಾಗಿ ಮಿಸ್ತ್ರಿ ಅವರು 2016ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್‌ನಿಂದ ಹೊರನಡೆಯಬೇಕಾಯಿತು.
ಹಲವು ಯೋಜನೆಗಳ ವಿಚಾರವಾಗಿ ಮಿಸ್ತ್ರಿ ಜೊತೆ ರತನ್ ಟಾಟಾ ಅವರಿಗೆ ಸಹಮತ ಇರಲಿಲ್ಲ ಎನ್ನಲಾಗಿದೆ. ನಷ್ಟ ಎದುರಿಸುತ್ತಿದ್ದ ಸಣ್ಣ ಕಾರು ‘ನ್ಯಾನೊ’ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮಿಸ್ತ್ರಿ ಕೈಗೊಂಡ ನಿರ್ಧಾರ ಕೂಡ ರತನ್ ಟಾಟಾ ಅವರಿಗೆ ಒಪ್ಪಿಗೆಯಾಗಿರಲಿಲ್ಲ ಎಂದು ಹೇಳಲಾಗಿದೆ. ‘ನ್ಯಾನೊ’ ಕಾರು ತಯಾರಿಕೆಯು ರತನ್ ಟಾಟಾ ಅವರ ಪ್ರೀತಿಯ ಯೋಜನೆಗಳಲ್ಲಿ ಒಂದಾಗಿತ್ತು.
ಮಿಸ್ತ್ರಿ ಅವರು ಹೊರನಡೆದ ನಂತರದಲ್ಲಿ ರತನ್ ಟಾಟಾ ಅವರು 2016ರ ಅಕ್ಟೋಬರ್‌ನಿಂದ ಅಲ್ಪ ಅವಧಿಗೆ ಟಾಟಾ ಸನ್ಸ್‌ನ ಮಧ್ಯಂತರ ಅಧ್ಯಕ್ಷರಾಗಿದ್ದರು. 2017ರಲ್ಲಿ ನಟರಾಜನ್ ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ, ನಿವೃತ್ತಿ ಬದುಕಿಗೆ ಮರಳಿದರು.
ಅಲ್ಲಿಂದ ಇದುವರೆಗೆ ರತನ್ ಟಾಟಾ ಅವರು ಟಾಟಾ ಸನ್ಸ್‌ನ ಗೌರವ ಅಧ್ಯಕ್ಷರಾಗಿ ಮುಂದುವರಿದಿದ್ದರು. ಆದರೆ ಈ ಅವಧಿಯಲ್ಲಿ ಹೊಸ ಕೆಲಸಗಳಿಗೆ ಅವರು ಮುಂದಾದರು. ಯುವ ಉದ್ಯಮಿಗಳಿಗೆ ನೆರವು ನೀಡಲು ತೀರ್ಮಾನಿಸಿ ಅವರು, ಹೊಸ ಕಾಲದ ಹಾಗೂ ತಂತ್ರಜ್ಞಾನ ಆಧಾರಿತವಾದ, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಗಣನೀಯ ಪಾತ್ರವನ್ನು ನಿರ್ವಹಿಸುವಂತಹ ನವೋದ್ಯಮಗಳಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು.
ರತನ್ ಟಾಟಾ ಅವರು ವೈಯಕ್ತಿಕವಾಗಿ ಹಾಗೂ ತಮ್ಮ ಹೂಡಿಕೆ ಕಂಪನಿ ಆರ್‌ಎನ್‌ಟಿ ಕ್ಯಾಪಿಟಲ್ ಅಡ್ವೈಸರ್ಸ್ ಮೂಲಕ 30ಕ್ಕೂ ಹೆಚ್ಚಿನ ನವೋದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಓಲಾ ಎಲೆಕ್ಟ್ರಿಕ್, ಪೇಟಿಎಂ, ಸ್ನ್ಯಾಪ್‌ಡೀಲ್, ಲೆನ್ಸ್‌ಕಾರ್ಟ್ ಮತ್ತು ಜಿವಾಮೆ ಕಂಪನಿಗಳಲ್ಲಿ ರತನ್ ಟಾಟಾ ಅವರು ಹೂಡಿಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.