ಮುಂಬೈ: ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಅವರು ತಮ್ಮ ಹಾಗೂ ಉದ್ಯಮಿ ರತನ್ ಟಾಟಾ ನಡುವೆ ಇದ್ದ ಸಮಾನ ಗುಣವೊಂದನ್ನು ಗುರುವಾರ ನೆನಪಿಸಿಕೊಂಡಿದ್ದಾರೆ. ರತನ್ ಟಾಟಾ ಅವರಿಗೆ ನಾಯಿಗಳು ಬಹಳ ಪ್ರಿಯವಾಗಿದ್ದವು ಎಂದು ಠಾಕ್ರೆ ಹೇಳಿದ್ದಾರೆ.
ಟಾಟಾ ಸಮೂಹಕ್ಕೆ ಸೇರಿದ ಕಟ್ಟಡಗಳ ಒಳಗಡೆ ಬರಲು ಬೀದಿ ನಾಯಿಗಳಿಗೂ ಅವಕಾಶ ಇತ್ತು. ಟಾಟಾ ಸಮೂಹದ ಪ‍್ರಧಾನ ಕಚೇರಿಯಿರುವ ಕಟ್ಟಡ, ತಾಜ್ ಹೋಟೆಲ್‌ಗೆ ಕೂಡ ಬೀದಿ ನಾಯಿಗಳ ಪ್ರವೇಶಕ್ಕೆ ಅಡ್ಡಿ ಉಂಟುಮಾಡುವಂತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಪದಗಳಲ್ಲಿ ಕಟ್ಟಿಕೊಡಲು ಆಗದಂತಹ ಪ್ರೀತಿಯನ್ನು ರತನ್ ಟಾಟಾ ಅವರು ನಾಯಿಗಳ ವಿಚಾರದಲ್ಲಿ ತೋರುತ್ತಿದ್ದರು ಎಂದು ಠಾಕ್ರೆ ಹೇಳಿದ್ದಾರೆ.
‘ಸರಿಸಾಟಿಯಿಲ್ಲದ ದಾನ ಕಾರ್ಯಗಳಿಗಾಗಿ ರತನ್ ಟಾಟಾ ಅವರನ್ನು ಬ್ರಿಟನ್ನಿನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ಇತ್ತು. ಆದರೆ ಅವರ ಪ್ರೀತಿಯ ಸಾಕುನಾಯಿ ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ತುತ್ತಾಯಿತು. ಆಗಿನ ರಾಜಕುಮಾರ ಪ್ರಿನ್ಸ್ ಅವರಿಗೆ ತಕ್ಷಣ ಕರೆಮಾಡಿದ ರತನ್ ಟಾಟಾ, ಅನಾರೋಗ್ಯಕ್ಕೆ ತುತ್ತಾಗಿರುವ ನಾಯಿಯನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ತಿಳಿಸಿ, ತಮ್ಮ ವಿಷಾದ ವ್ಯಕ್ತಪಡಿಸಿದರು’ ಎಂದು ಠಾಕ್ರೆ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘ರತನ್ ಟಾಟಾ ಅವರ ಮುಂದೆ ಇರಿಸುತ್ತಿದ್ದ ಯಾವ ಪ್ರಸ್ತಾವನೆಯೂ ತಿರಸ್ಕೃತ ಆಗುತ್ತಿರಲಿಲ್ಲ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾವು ಯಾವುದೇ ನೀಲನಕ್ಷೆಯನ್ನು ಅವರ ಮುಂದೆ ಇರಿಸಿದರೂ, ಅವರು ಬಹಳ ಮುಖ್ಯವಾದ ಸಲಹೆಗಳನ್ನು ನೀಡುತ್ತಿದ್ದರು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನಾ ನಾಸಿಕ್ ಸಸ್ಯಶಾಸ್ತ್ರೀಯ ಉದ್ಯಾನಕ್ಕೆ ತಕ್ಷಣವೇ ನೆರವು ಒದಗಿಸಿದ್ದರು’ ಎಂದು ಠಾಕ್ರೆ ನೆನಪು ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.