ಪುರಿ: ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ, ಹೆಸರಾಂತ ಜಗನ್ನಾಥ ದೇವಸ್ಥಾನದ ಖಜಾನೆ ‘ರತ್ನ ಭಂಡಾರ’ವನ್ನು, ಅಲ್ಲಿರುವ ಆಭರಣಗಳ ಸ್ಥಳಾಂತರಕ್ಕಾಗಿ ಗುರುವಾರ ತೆರೆಯಲಾಯಿತು.
ಆಭರಣಗಳನ್ನು ದೇಗುಲದ ಆವರಣದಲ್ಲಿಯೇ ತಾತ್ಕಾಲಿಕವಾಗಿ ನಿರ್ಮಿಸಿರುವ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗುತ್ತದೆ. ಖಜಾನೆಯನ್ನು ಬೆಳಿಗ್ಗೆ 9.51ಕ್ಕೆ ತೆರೆಯಲಾಯಿತು.
ಜಗನ್ನಾಥ ದೇವರಿಗೆ ಬೆಳಿಗ್ಗೆ 9ಕ್ಕೆ ವಿಶೇಷ ಪೂಜೆ ಬಳಿಕ, ಒಡಿಶಾ ಸರ್ಕಾರ ರಚಿಸಿರುವ ಮೇಲುಸ್ತುವಾರಿ ಸಮಿತಿಯ ಸದಸ್ಯರು ರತ್ನ ಭಂಡಾರ ತೆರೆಯುವ ಕಾರ್ಯಕ್ಕೆ ಚಾಲನೆ ನೀಡಿದರು.
46 ವರ್ಷಗಳ ಬಳಿಕ ರತ್ನ ಭಂಡಾರವನ್ನು ಜುಲೈ 14ರಂದು ಮೊದಲ ಬಾರಿಗೆ ತೆರೆಯಲಾಗಿತ್ತು. ಆ ದಿನ ಖಜಾನೆಯ ಹೊರ ಕಪಾಟುಗಳಲ್ಲಿದ್ದ ಆಭರಣಗಳ ಸ್ಥಳಾಂತರ ಪ್ರಕ್ರಿಯೆ ನಡೆದಿತ್ತು.
ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ, ನ್ಯಾಯಮೂರ್ತಿ ಬಿಸ್ವನಾಥ್ ರತ್ ಅವರು, ‘ಆಭರಣ ಸ್ಥಳಾಂತರ ಪ್ರಕ್ರಿಯೆಯ ವೇಳೆ ಖುದ್ದು ಉಪಸ್ಥಿತರಿರಬೇಕು ಎಂದು ಪುರಿಯ ಟಿಟುಲರ್ ರಾಜ ಮತ್ತು ಗಜಪತಿ ಮಹಾರಾಜ ದಿವ್ಯ ಸಿಂಗ್ ದೇವ್ ಅವರಿಗೆ ಮನವಿ ಮಾಡಿದ್ದರು.
ಆಭರಣ ಸ್ಥಳಾಂತರ, ಮೌಲ್ಯಮಾಪನ ಪ್ರಕ್ರಿಯೆಗೆ ರಚಿಸಲಾದ ನಿಯಮಗಳ ಅನುಸಾರ ಭದ್ರತಾ ಕೊಠಡಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಸೇರಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ, ಹಾವು ಹಿಡಿಯುವವರು, ಒಡಿಶಾ ಕ್ಷಿಪ್ರ ಕಾರ್ಯಪಡೆ, ಅಗ್ನಿಶಾಮಕ ಸೇವೆಯ ಸಿಬ್ಬಂದಿ ತುರ್ತು ಸಂದರ್ಭಕ್ಕೆ ಸಜ್ಜಾಗಿರಬೇಕು ಎಂದು ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಆಭರಣ ಸ್ಥಳಾಂತರ ಪ್ರಕ್ರಿಯೆ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತವು ಬೆಳಿಗ್ಗೆ 8ರಿಂದಲೇ ಭಕ್ತಗಣಕ್ಕೆ ಪ್ರವೇಶ ನಿರ್ಬಂಧಿಸಿತ್ತು. ನಿಯೋಜಿತ ಸಿಬ್ಬಂದಿಗಷ್ಟೇ ಪ್ರವೇಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.