ADVERTISEMENT

ಒಡಿಶಾ | 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ ‘ರತ್ನಭಂಡಾರ’

ಪಿಟಿಐ
Published 18 ಜುಲೈ 2024, 7:11 IST
Last Updated 18 ಜುಲೈ 2024, 7:11 IST
<div class="paragraphs"><p>ಪುರಿ ಜಗನ್ನಾಥ ದೇವಾಲಯ</p></div>

ಪುರಿ ಜಗನ್ನಾಥ ದೇವಾಲಯ

   

(ಪಿಟಿಐ ಚಿತ್ರ)

ಪುರಿ: ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ದ ಒಳ ಕಪಾಟುಗಳನ್ನು ಇಂದು (ಗುರುವಾರ) ಪುನಃ ತೆರೆಯಲಾಯಿತು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.

ADVERTISEMENT

ರತ್ನ ಭಂಡಾರದ ಕಪಾಟುಗಳಲ್ಲಿನ ಆಭರಣಗಳನ್ನು ದೇಗುಲದ ಆವರಣದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಭದ್ರತಾ ಕೊಠಡಿಗೆ ಸ್ಥಳಾಂತರಿಸುವ ಕಾರಣದಿಂದಾಗಿ ಬೆಳಿಗ್ಗೆ 9.51ಕ್ಕೆ ಪುನಃ ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದ ಪ್ರವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮತ್ತು ಒಡಿಶಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿಸ್ವಂತ್ ರತ್, ರತ್ನ ಭಂಡಾರದ ಒಳ ಕಪಾಟಗಳಲ್ಲಿನ ಆಭರಣಗಳನ್ನು ಸುಗಮವಾಗಿ ಸ್ಥಳಾಂತರಿಸಲು ಜಗನ್ನಾಥನ ಆಶೀರ್ವಾದ ಕೋರಿದ್ದೇವೆ ಎಂದು ಹೇಳಿದರು.

‘ಅಧಿಕೃತ ವ್ಯಕ್ತಿಗಳಿಗೆ ಸಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಆಭರಣಗಳನ್ನು ಸ್ಥಳಾಂತರಿಸಲು ಸಾಧ್ಯವಾಗದಿದ್ದರೆ ಎಸ್‌ಒಪಿ ಪ್ರಕಾರ ಕೆಲಸ ಮುಂದುವರಿಯಲಿದೆ’ ಎಂದು ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.

‘ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇವಾಲಯದ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ತಿಳಿಸಿದ್ದಾರೆ.

ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಹಾವು ಹಿಡಿಯುವವರು, ಒಡಿಶಾ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಸನ್ನದ್ಧರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ರತ್ನ ಭಂಡಾರದ ಕಪಾಟುಗಳನ್ನು ತೆರೆಯುವ ಮುನ್ನ ಭಗವಾನ್ ಜಗನ್ನಾಥಗೆ ಪೂಜೆ ಹಾಗೂ ಪಾರ್ಥನೆ ಸಲ್ಲಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಇಂದು ಬೆಳಗ್ಗೆ 8 ಗಂಟೆಯಿಂದಲೇ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ದೇವಾಲಯದ ಆಡಳಿತ ಮಂಡಳಿ ನಿರ್ಬಂಧಿಸಿದೆ.

ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ವನ್ನು 46 ವರ್ಷದ ಬಳಿಕ ಭಾನುವಾರ ಮೊದಲ ಬಾರಿಗೆ ತೆರೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.