ಪುರಿ: ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ವನ್ನು 46 ವರ್ಷದ ಬಳಿಕ ಭಾನುವಾರ ತೆರೆಯಲಾಯಿತು. ಖಜಾನೆಯಲ್ಲಿರುವ ಆಭರಣಗಳ ಪರಿಶೀಲನೆ ಮಾಡುವುದು ಮತ್ತು ಖಜಾನೆ ವ್ಯವಸ್ಥೆಯ ದುರಸ್ತಿ ಕೈಗೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ರತ್ನ ಭಂಡಾರವನ್ನು ಈಗ ತೆರೆದರೂ ಆಭರಣಗಳು ಸೇರಿ ಅಲ್ಲಿರುವ ಮೌಲ್ಯಯುತ ವಸ್ತುಗಳ ತಪಶೀಲು ಕಾರ್ಯ ತಕ್ಷಣವೇ ನಡೆಯುವುದಿಲ್ಲ’ ಎಂದು ಶ್ರೀ ಜಗನ್ನಾಥ ದೇವಸ್ಥಾನ ಆಡಳಿತದ ಮುಖ್ಯ ಆಡಳಿತಾಧಿಕಾರಿ ಅರಬಿಂದಾ ಪಾಧೀ ಅವರು ತಿಳಿಸಿದ್ದಾರೆ.
ಖಜಾನೆಯ ಒಳ ಮತ್ತು ಹೊರಗಿನ ಕಪಾಟುಗಳಲ್ಲಿ ಇರಿಸಿರುವ ಆಭರಣಗಳು ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ಮರದ ಪೆಟ್ಟಿಗೆಗಳಲ್ಲಿ ಇರಿಸಿ ತಾತ್ಕಾಲಿಕವಾಗಿ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲಾಗುತ್ತದೆ. ತಾತ್ಕಾಲಿಕ ಸ್ಟ್ರಾಂಗ್ ರೂಂ ಗುರುತಿಸಲಾಗಿದೆ. ಭದ್ರತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳು ಆಗಿವೆ ಎಂದರು.
‘ಸರ್ಕಾರದ ಅನುಮೋದನೆ ಆಧರಿಸಿ ಆಭರಣಗಳ ವರ್ಗೀಕರಣ ಮತ್ತು ಪಟ್ಟಿ ಮಾಡುವ ಕಾರ್ಯ ಆರಂಭವಾಗಲಿದೆ. ಆಭರಣಗಳ ಮೌಲ್ಯಮಾಪಕರು, ಅಕ್ಕಸಾಲಿಗರು, ತಜ್ಞರ ನೆರವು ಪಡೆಯಲಾಗುತ್ತದೆ. ರತ್ನ ಭಂಡಾರದ ಸುರಕ್ಷತೆಯೇ ಆದ್ಯತೆಯಾಗಿದೆ’ ಎಂದು ಹೇಳಿದರು.
ಖಜಾನೆ ತೆರೆಯಲು ಮಧ್ಯಾಹ್ನ 1.28 ಗಂಟೆ ಸುಮುಹೂರ್ತ ಎಂದು ಗುರುತಿಸಲಾಗಿತ್ತು. ಈ ಉದ್ದೇಶಕ್ಕಾಗಿ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆಗೆ ದೇಗುಲದ ಆವರಣವನ್ನು ಪ್ರವೇಶಿಸಿದರು. ಪೂಜಾವಿಧಿಯ ಬಳಿಕ ರತ್ನಭಂಡಾರ ತೆರೆಯಲಾಯಿತು.
ರತ್ನಭಂಡಾರ ತೆರೆಯುವುದು ಒಡಿಶಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಆಗ ಆಡಳಿತ ಪಕ್ಷವಾಗಿದ್ದ ಬಿಜೆಡಿಯನ್ನು ಗುರಿಯಾಗಿಸಿ ಬಿಜೆಪಿ ವಾಗ್ದಾಳಿ ನಡೆಸಿತ್ತು. ಅಧಿಕಾರಕ್ಕೆ ಬಂದರೆ ರತ್ನ ಭಂಡಾರ ತೆರೆಯುವುದಾಗಿ ಭರವಸೆ ಕೊಟ್ಟಿತ್ತು.
‘ಶ್ರೀ ಜಗನ್ನಾಥ ದೇವರ ಕೃಪೆ, ಒಡಿಯಾ ಸಮುದಾಯ ಮತ್ತು ಒಡಿಯಾ ಅಸ್ಮಿತೆಯ ಆಶಯದಂತೆ ಈಗ ಪ್ರಯತ್ನಗಳು ಆರಂಭವಾಗಿವೆ’ ಎಂದು ಮುಖ್ಯಮಂತ್ರಿಯವರ ಸಚಿವಾಲಯವು ‘ಎಕ್ಸ್’ನಲ್ಲಿ ಒಡಿಯಾ ಭಾಷೆಯಲ್ಲಿ ಸಂದೇಶವನ್ನು ಹಂಚಿಕೊಂಡಿದೆ.
‘ನಿಮ್ಮ ಆಶಯದಂತೆ ದೇವಸ್ಥಾನದ ನಾಲ್ಕೂ ಗೇಟ್ ತೆರೆಯಲಾಗಿದೆ. 46 ವರ್ಷದ ಬಳಿಕ ಸದುದ್ದೇಶಕ್ಕಾಗಿ ಇಂದು ರತ್ನ ಭಂಡಾರವನ್ನು ತೆರೆಯಲಾಗುತ್ತದೆ ಎಂದೂ ಸರ್ಕಾರ ತನ್ನ ಸಂದೇಶದಲ್ಲಿ ತಿಳಿಸಿದೆ.
ರತ್ನ ಭಂಡಾರ ತೆರೆದ ಸಂದರ್ಭದಲ್ಲಿ ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಥ್, ದೇವಸ್ಥಾನ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಅರಬಿಂದಾ ಪಾಧೀ, ಪುರಾತತ್ಮ ಸರ್ವೇಕ್ಷಣಾ ಇಲಾಖೆಯ ಸೂಪರಿಂಟೆಂಡೆಂಟ್ ಡಿ.ಬಿ. ಗಡನಾಯಕ್ ಮತ್ತು ಪುರಿಯ ರಾಜಮನೆತನದ ‘ಗಜಪತಿ ಮಹಾರಾಜ’ರ ಪ್ರತಿನಿಧಿಗಳು ಇದ್ದರು.
ಪ್ರತ್ಯೋಷಿ ಮಹಾಪಾತ್ರ, ಭಂಡಾರ್ ಮೇಕಪ್, ಚಾಂದೌಕರಾಣ, ದಿಯೊಲಿಕರಣ್ ಅವರು ವಿಧಿ–ವಿಧಾನಗಳನ್ನು ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.