ADVERTISEMENT

EVM ಅಕ್ರಮ ಆರೋಪ: ಮತಪತ್ರಗಳ ಮೂಲಕ ಮರುಚುನಾವಣೆಗೆ ಸಂಜಯ್ ರಾವುತ್ ಆಗ್ರಹ

ಪಿಟಿಐ
Published 25 ನವೆಂಬರ್ 2024, 10:07 IST
Last Updated 25 ನವೆಂಬರ್ 2024, 10:07 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್‌, ಮಹಾರಾಷ್ಟ್ರದಲ್ಲಿ ಮತಪತ್ರಗಳ ಮೂಲಕ ಮರುಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂಗಳ ಅಸಮರ್ಪಕ ಕಾರ್ಯಗಳ ಬಗ್ಗೆ ಆರೋಪಿಸಿದ್ದು, ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಮಗ್ರತೆಯ ಕುರಿತು ಪ್ರಶ್ನಿಸಿದ್ದಾರೆ.

‘ಇವಿಎಂಗಳ ಕುರಿತು ಸುಮಾರು 450 ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಈ ಬಗ್ಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಲಾಗಿದೆ ಎಂದು ನಾವು ಹೇಗೆ ಹೇಳಲಾಗುತ್ತದೆ?. ಆದ್ದರಿಂದ, ಫಲಿತಾಂಶವನ್ನು ಬದಿಗಿಟ್ಟು ಮತಪತ್ರಗಳ ಮೂಲಕ ಮರು ಚುನಾವಣೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ರಾವುತ್‌ ಹೇಳಿದ್ದಾರೆ.

ADVERTISEMENT

‘ಮಹಾ ವಿಕಾಸ ಆಘಾಡಿ ಮೈತ್ರಿಕೂಟವು ಒಗ್ಗಟ್ಟಿನಿಂದ ಹೋರಾಡಿದೆ. ಮಹಾರಾಷ್ಟ್ರದಲ್ಲಿ ಅಪಾರ ಗೌರವ ಹೊಂದಿರುವ ಶರದ್‌ ಪವಾರ್‌ ಅವರಂತಹ ನಾಯಕರು ಸಹ ಸೋಲು ಅನುಭವಿಸಿದ್ದಾರೆ. ಈ ವೈಫಲ್ಯದ ಹಿಂದಿನ ಕಾರಣಗಳನ್ನು ನಾವು ವಿಶ್ಲೇಷಿಸಬೇಕಾಗಿದೆ. ಇದಕ್ಕೆ ಕಾರಣವೆಂದರೆ ಇವಿಎಂಗಳ ದುರ್ಬಳಕೆ ಮತ್ತು ವ್ಯವಸ್ಥೆಯ ದುರುಪಯೋಗ, ಅಸಂವಿಧಾನಿಕ ಆಚರಣೆಗಳು ಮತ್ತು ಇವುಗಳಿಗೆ ಸಂಬಂಧಿಸಿದ ನ್ಯಾಯಾಂಗ ತೀರ್ಮಾನಗಳನ್ನು ನಿವೃತ್ತ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಪರಿಹರಿಸದೆ ಬಿಟ್ಟಿರುವುದು’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಮಹಾಯುತಿ‘ ಮೈತ್ರಿಕೂಟವು ಅನ್ಯಾಯಯುತ ರೀತಿಯಲ್ಲಿ ಚುನಾವಣೆ ನಡೆಸುತ್ತಿದೆ. ಇವಿಎಂಗಳಲ್ಲಿನ ವ್ಯತ್ಯಾಸಗಳು, ಹೊಂದಿಕೆಯಾಗದ ಸಂಖ್ಯೆಗಳು ಮತ್ತು ರಾಜ್ಯದಾದ್ಯಂತ ಮತ ಅಕ್ರಮಗಳು ಹೀಗೆ ಹಲವು ವರದಿಗಳನ್ನು ಗಮನಿಸಿದರೆ ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ರಾವುತ್‌ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್‌ 20ರಂದು ಮತದಾನ ನಡೆದಿತ್ತು. ನವೆಂಬರ್‌ 23ರಂದು ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 236 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.