ADVERTISEMENT

Sanatana Dharma | ಧರ್ಮ ಅಳಿಸಲು ರಾವಣ, ಕಂಸರಿಗೇ ಸಾಧ್ಯವಾಗಿಲ್ಲ: ಯೋಗಿ

ಪಿಟಿಐ
Published 8 ಸೆಪ್ಟೆಂಬರ್ 2023, 2:22 IST
Last Updated 8 ಸೆಪ್ಟೆಂಬರ್ 2023, 2:22 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ಲಖನೌ: ‘ಅನಾದಿ ಕಾಲದಿಂದಲೂ ಸನಾತನ ಧರ್ಮದ ಮೇಲೆ ಹಲವು ದಾಳಿಗಳಾಗಿವೆ. ಆದರೆ ಧರ್ಮಕ್ಕೆ ಹಾನಿ ಮಾಡಲು ಅವುಗಳಿಂದ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಪರವಾಲಂಬಿಗಳಿಂದ ಈಗಲೂ ಅದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆಗೆ ಅವರು ಮೈಕ್ರೊ ಬ್ಲಾಗಿಂಗ್ ‘ಎಕ್ಸ್‌’ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ರಾವಣನ ದುರಹಂಕಾರ ಸನಾತನ ಧರ್ಮವನ್ನು ಅಳಿಸಲಾಗಲಿಲ್ಲ. ಕಂಸನ ಘರ್ಜನೆ ಧರ್ಮವನ್ನು ಅಲುಗಾಡಿಸಲಾಗಲಿಲ್ಲ. ಬಾಬರ್‌ ಮತ್ತು ಔರಂಗಜೇಬನ ದೌರ್ಜನ್ಯಗಳೂ ಸನಾತನ ಧರ್ಮವನ್ನು ಏನೂ ಮಾಡಲು ಆಗಲಿಲ್ಲ. ಈಗ ಈ ಅಧಿಕಾರ ದಾಹವುಳ್ಳ ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಅಳಿಸಿಹಾಕಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಸಮಾನತೆ, ಸಾಮಾಜಿಕ ನ್ಯಾಯದ ವಿರುದ್ಧ ಸನಾತನ ಧರ್ಮವಿದೆ ಎಂದು ಆರೋಪಿಸಿದ್ದ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್‌, ಅದನ್ನು ಡೆಂಗಿ ಮತ್ತು ಮಲೇರಿಯಾಗೆ ಹೋಲಿಸಿ, ನಿರ್ಮೂಲನೆಗೆ ಅಗತ್ಯ ಎಂದಿದ್ದರು ಎಂದು ವರದಿಯಾಗಿತ್ತು.  

ಯೋಗಿ ಆದಿತ್ಯನಾಥ್ ಅವರು ಯಾರ ಹೆಸರನ್ನೂ ತೆಗೆದುಕೊಳ್ಳದೇ, ‘ಸತಾನ ಧರ್ಮದ ಮೇಲೆ ದುರುದ್ದೇಶಪೂರಿತ ದಾಳಿ ನಡೆಸುವ ಮೂಲಕ ಮಾನವೀಯತೆಯನ್ನೇ ತೊಂದರೆಗೆ ಸಿಲುಕಿಸವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಸನಾತನ ಧರ್ಮವು ಸೂರ್ಯನಂತೆಯೇ ಶಕ್ತಿಯ ಮೂಲ. ಸೂರ್ಯನತ್ತ ಉಗಿಯುವ ಆಲೋಚನೆಯನ್ನು ಒಬ್ಬ ಮೂರ್ಖನಷ್ಟೇ ಮಾಡಬಲ್ಲ. ವಾಸ್ತವದಲ್ಲಿ ತನ್ನ ಮುಖದ ಮೇಲೇ ಬೀಳುತ್ತದೆ. ಇಂಥ ತಪ್ಪುಗಳಿಂದಾಗಿ ಅವರ ಮುಂದಿನ ತಲೆಮಾರುಗಳು ಅವಮಾನದಿಂದ ಬದುಕಬೇಕಾಗಲಿದೆ. ಭಾರತದ ಭವ್ಯ ಪರಂಪರೆ ಕುರಿತು ಪ್ರತಿಯೊಬ್ಬರಿಗೂ ಹೆಮ್ಮೆ ಇರಬೇಕು’ ಎಂದು ಯೋಗಿ ಹೇಳಿದ್ದಾರೆ.

‘ದೇವರನ್ನು ಅಳಿಸಿಹಾಕಲು ಹೊರಟವರು ಅವರೇ ನಾಶವಾಗಿದ್ದಾರೆ. 500 ವರ್ಷಗಳ ಹಿಂದೆಯೂ ಸನಾತನ ಧರ್ಮವನ್ನು ಅವಮಾನಿಸಲಾಗಿತ್ತು. ಆದರೆ ಇಂದು ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ದೇಶದ ಪ್ರಗತಿಯಲ್ಲಿ ಅಡ್ಡಗಾಲು ಹಾಕುತ್ತಿವೆ. ಆದರೆ ಅವುಗಳ ಪ್ರಯತ್ನ ಕೈಗೂಡದು’ ಎಂದು ಕಿಡಿಯಾಡಿದ್ದಾರೆ.

‘ಪ್ರತಿ ಯುಗದಲ್ಲೂ ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ. ರಾವಣ ಸುಳ್ಳು ಹೇಳಲು ಪ್ರಯತ್ನಿಸಲಿಲ್ಲವೇ? ಅದಕ್ಕೂ ಮೊದಲು ದೇವರು ಹಾಗೂ ಸತಾನತನ ಧರ್ಮವನ್ನು ಹಿರಣ್ಯಾಕ್ಷ ಅವಮಾನಿಸಲಿಲ್ಲವೇ? ದೇವರ ಅಸ್ತಿತ್ವದ ಕುರಿತೇ ಕಂಸ ಸವಾಲೆಸೆಯಲಿಲ್ಲವೇ? ಆದರೆ ಅವರೆಲ್ಲರೂ ತಮ್ಮ ದುರುದ್ದೇಶಪೂರಿತ ಪ್ರಯತ್ನದಲ್ಲೇ ನಾಶವಾಗಿ ಹೋಗಿದ್ದಾರೆ. ಸನಾತನ ಧರ್ಮವೇ ಶಾಶ್ವತ ಸತ್ಯ ಎಂಬುದನ್ನು ಯಾರೂ ಮರೆಯಬಾರದು. ಅದಕ್ಕೆ ಹಾನಿಯನ್ನೂ ಮಾಡಬಾರದು’ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.