ADVERTISEMENT

ಭೋಪಾಲ್: ಹುಲಿಗೆ ಕಲ್ಲೆಸೆತ– ನಟಿ ರವೀನಾ ಟಂಡನ್ ಟ್ವೀಟ್ ಆಧರಿಸಿ ತನಿಖೆಗೆ ಆದೇಶ

ಪಿಟಿಐ
Published 22 ನವೆಂಬರ್ 2022, 11:26 IST
Last Updated 22 ನವೆಂಬರ್ 2022, 11:26 IST
   

ಭೋಪಾಲ್: ಹುಲಿಗಳಿದ್ದ ಬೋನಿಗೆ ಕೆಲ ಕಿಡಿಗೇಡಿಗಳು ಕಲ್ಲು ಎಸೆಯುತ್ತಿರುವ ಬಗ್ಗೆ ಬಾಲಿವುಡ್ ನಟಿ ರವೀನಾ ಟಂಡನ್ ವಿಡಿಯೊ ಸಹಿತ ಮಾಡಿದ್ದ ಟ್ವೀಟ್ ಆಧರಿಸಿ ಮಧ್ಯಪ್ರದೇಶ ವನ ವಿಹಾರ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಭೋಪಾಲ್ ಕೆರೆಯ ದಡದಲ್ಲಿರುವ ವನ ವಿಹಾರ ಉದ್ಯಾನದಲ್ಲಿ ಹುಲಿಗಳಿರುವ ಬೋನಿಗೆ ಕೆಲ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಕಲ್ಲು ಹೊಡೆಯಬೇಡಿ ಎಂದು ಬುದ್ಧಿ ಹೇಳಿದರೂ ಕೇಳದೆ, ಜೋರಾಗಿ ಗಹಗಹಿಸಿ ನಗುತ್ತಾ, ಕಿರುಚುತ್ತಾ ಚೇಷ್ಟೆ ಮುಂದುವರಿಸಿದ್ದಾರೆ. ಬೋನನ್ನು ಅಲ್ಲಾಡಿಸಿ ಉದ್ಧಟತನ ಮೆರೆದಿದ್ಧಾರೆ. ಹುಲಿಗಳಿಗೆ ಯಾವುದೇ ಭದ್ರತೆ ಇಲ್ಲ. ಇಲ್ಲಿ ಅವುಗಳ ಅಪಮಾನ ನಡೆಯುತ್ತಿದೆ ಎಂದು ರವೀನಾ ಸೋಮವಾರ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಟ್ವೀಟ್ ಪ್ರತಿಕ್ರಿಯಿಸಿರುವ ಉದ್ಯಾನದ ಆಡಳಿತ ಮಂಡಳಿ, ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಅಂತಹ ಕೃತ್ಯ ಎಸಗಿದವರು ವನ್ಯಜೀವಿಗಳ ರಕ್ಷಣಾ ಕಾಯ್ದೆಯಡಿ ಶಿಕ್ಷೆಗೆ ಅರ್ಹರು ಎಂದು ಅದು ಹೇಳಿದೆ.

ADVERTISEMENT

ವನ್ಯಜೀವಿಗಳ ಮೇಲೆ ದೈಹಿಕ ಹಲ್ಲೆ ನಡೆಸುವ ಕೃತ್ಯಗಳ ಬಗ್ಗೆ ವನ ವಿಹಾರ ರಾಷ್ಟ್ರೀಯ ಉದ್ಯಾನದ ಆಡಳಿತ ಮಂಡಳಿಯು ಶೂನ್ಯ ಸಹಿಷ್ಣುತೆ ಹೊಂದಿದೆ. ಅಂತಹ ಕೃತ್ಯಗಳಲ್ಲಿ ತೊಡಗುವುದರಿಂದ ದೂರವಿರಿ ಎಂದು ನಾವು ಸಾರ್ವಜನಿಕರಿಗೆ ಒತ್ತಾಯಿಸುತ್ತೇವೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಯಾರು ಕಲ್ಲು ಎಸೆಯುತ್ತಿದ್ದಾರೆ ಎಂಬುದು ರವೀನಾ ಹಂಚಿಕೊಂಡಿರುವ ವಿಡಿಯೊದಲ್ಲಿ ಗೊತ್ತಾಗುತ್ತಿಲ್ಲ. ಕಲ್ಲು ಏಕೆ ಹೊಡೆಯುತ್ತಿದ್ದೀರಿ ಎಂದು ಕೆಲವರು ಕೂಗುತ್ತಿರುವುದು ಕೇಳಿಸುತ್ತಿದೆ. ಇಬ್ಬರು ಕಿರುಚುತ್ತಾ, ಸೈಕಲ್ ಬೆಲ್ ಹೊಡೆಯುತ್ತಾ ದುರ್ವರ್ತನೆ ತೋರುತ್ತಿರುವುದು ವಿಡಿಯೊದಲ್ಲಿದೆ ಎಂದು ಉದ್ಯಾನದ ನಿರ್ದೇಶಕಿ ಪದ್ಮ ಪ್ರಿಯ ಬಾಲಕೃಷ್ಣನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.