ಮುಂಬೈ:ಒಂದೇದಿನದಲ್ಲಿ ಮೂರು ಸಿನಿಮಾಗಳು ಸೇರಿ ₹ 120 ಕೋಟಿ ಗಳಿಸಿವೆ, ಎಲ್ಲಿದೆ ಆರ್ಥಿಕ ಹಿಂಜರಿತ? ಹೀಗೆ ಪ್ರಶ್ನಿಸಿದ್ದುಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಸಮಸ್ಯೆ ಇದೆ ಎಂಬ ವರದಿಯನ್ನು ಅಲ್ಲಗಳೆದಿದ್ದಾರೆ. ಆರ್ಥಿಕತೆಯನ್ನು ಅಳೆಯುವ ಈಗಿನ ಮಾನದಂಡವನ್ನೇ ಪ್ರಶ್ನಿಸಿದರು.
ಇದನ್ನೂ ಓದಿ:ಜಿಡಿಪಿ: 5 ವರ್ಷಗಳ ಕನಿಷ್ಠ ಮಟ್ಟಕ್ಕೆ
ನಿರುದ್ಯೋಗ ಕುರಿತನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ಸಮೀಕ್ಷಾ ವರದಿ ಮತ್ತು ಆರ್ಥಿಕ ಹಿಂಜರಿತವನ್ನು ನಿರಾಕರಿಸಿದ ರವಿಶಂಕರ ಪ್ರಸಾದ್,ಆರ್ಥಿಕತೆಯನ್ನು ಅಳೆಯುವ ನಿಜವಾದ ಮಾನದಂಡ ಜಿಡಿಪಿ ಅಲ್ಲ, ಗಲ್ಲಾ ಪೆಟ್ಟಿಗೆ ಸಂಗ್ರಹ (ಬಾಕ್ಸ್ ಆಫೀಸ್ ಹಿಟ್ಸ್) ಎಂದು ಹೇಳಿದ್ದಾರೆ.
‘ಅಕ್ಟೋಬರ್ 2ರಂದು ತೆರೆಕಂಡ ಮೂರು ಸಿನಿಮಾಗಳಿಂದ ಒಂದೇ ದಿನದಲ್ಲಿ ₹ 120 ಕೋಟಿ ಸಂಗ್ರಹವಾಗಿದೆ. ಹೀಗಾಗಿ ಹಿಂಜರಿತವಿಲ್ಲ. ಸಿನಿಮಾಗಳಿಂದ ಉತ್ತಮ ವಹಿವಾಟು ನಡೆಯುತ್ತಿದೆ. ಒಳ್ಳೆಯ ಆರ್ಥಿಕತೆ ಹೊಂದಿದ ದೇಶದಿಂದಲೇ ಇಷ್ಟೊಂದು ಹಣ ಬರಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಎನ್‌ಎಸ್‌ಎಸ್‌ಒ ವರದಿಯನ್ನು ಅಲ್ಲಗಳೆದ ಅವರು, ‘ನಾನು ನಿಮಗೆ 10 ದತ್ತಾಂಶಗಳನ್ನು ನೀಡಿದ್ದೇನೆ. ಅವು ಯಾವುವೂ ಆ ವರದಿಯಲ್ಲಿಲ್ಲ. ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ನಾವು ಹೇಳಿಲ್ಲ. ಕೆಲವು ಜನರು ಹಾದಿ ತಪ್ಪಿಸಲು ಯತ್ನಿಸಿದರು’ ಎಂದು ಹೇಳಿದರು.
ಉದ್ಯೋಗಕ್ಕೆ ಅರ್ಹರಾದ ನಗರ ಪ್ರದೇಶಗಳ ಯುವಜನತೆಯಲ್ಲಿ ಶೇ 7.8ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇ 5.3ರಷ್ಟು ನಿರುದ್ಯೋಗಿಗಳಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರಲ್ಲಿನ ನಿರುದ್ಯೋಗ ಪ್ರಮಾಣ ಶೇ 6.2 ಮತ್ತು ಮಹಿಳೆಯರಲ್ಲಿ ಶೇ 5.7ರಷ್ಟಿದೆ ಎಂದು ಮೇನಲ್ಲಿ ವರದಿಯಾಗಿತ್ತು. ಅದಕ್ಕೂ ಮುನ್ನ,ದೇಶದಲ್ಲಿ 2017–18ನೇ ಆರ್ಥಿಕ ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 6.1ರಷ್ಟಿತ್ತು ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್(ಎನ್‌ಎಸ್‌ಎಸ್‌ಒ) ಸಮೀಕ್ಷಾ ವರದಿ ಉಲ್ಲೇಖಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.