ADVERTISEMENT

ಆರ್‌ಬಿಐ ಅನುಮೋದನೆಗೂ ಮೊದಲೇ ನೋಟ್‌ ಬ್ಯಾನ್‌ ಘೋಷಣೆ: ಆರ್‌ಟಿಐ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 11:08 IST
Last Updated 11 ಮಾರ್ಚ್ 2019, 11:08 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಗರಿಷ್ಠ ಮುಖ ಬೆಲೆಯ ನೋಟು ರದ್ದತಿ ನಿರ್ಧಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ನಿರ್ದೇಶಕ ಮಂಡಳಿಯ ಅನುಮೋದನೆಗೂ ಮೊದಲೇ ಘೋಷಿಸಿದ್ದರು ಎನ್ನುವ ಸಂಗತಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಗೊತ್ತಾಗಿದೆ.

ನಿರ್ದೇಶಕ ಮಂಡಳಿಯ ಸಭಾ ನಡಾವಳಿಯ ಟಿಪ್ಪಣಿಗಳ ಬಗ್ಗೆ ವಿವರ ನೀಡಲು ಕೇಂದ್ರೀಯ ಬ್ಯಾಂಕ್‌ಗೆ ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರು ಮನವಿ ಮಾಡಿಕೊಂಡಿದ್ದರು. ಆರಂಭದಲ್ಲಿ ಆರ್‌ಬಿಐ ವಿವರಗಳನ್ನು ನೀಡಲು ನಿರಾಕರಿಸಿತ್ತು. ಪ್ರಸ್ತುತ ಇದೇ ಮೊದಲ ಬಾರಿಗೆ ಸಭೆಯ ವಿವರವನ್ನು ಬಹಿರಂಗಪಡಿಸಿದೆ.

ನವೆಂಬರ್‌ 8ರ ಸಂಜೆ 5.30ಕ್ಕೆ ಸೇರಿದ್ದ ಸಭೆಯಲ್ಲಿ ಹಣಕಾಸು ಸಚಿವಾಲಯದ ಕರಡು ಪ್ರಸ್ತಾವ ಚರ್ಚೆಗೆ ತೆಗೆದುಕೊಂಡು ಅನುಮೋದನೆ ನೀಡುವ ಮೊದಲೇ ಪ್ರಧಾನಿ ಈ ನಿರ್ಧಾರ ಘೋಷಿಸಿದ್ದರು. ನೋಟು ರದ್ದತಿ ಘೋಷಣೆ ಹೊರ ಬೀಳುವುದಕ್ಕೂ ಎರಡೂವರೆ ಗಂಟೆಗಳ ಮೊದಲು ಆರ್‌ಬಿಐನ ನಿರ್ದೇಶಕ ಮಂಡಳಿಯು ಸಭೆ ಸೇರಿತ್ತು.

ADVERTISEMENT

ಆರ್‌ಬಿಐ ತನ್ನ ಅನುಮೋದನೆಯನ್ನು 38 ದಿನಗಳ ನಂತರ (ಡಿ. 16) ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು. ನೋಟು ರದ್ದತಿ ಪರ ಸರ್ಕಾರ ಮಂಡಿಸಿದ್ದ ಬಹುತೇಕ ವಾದಗಳನ್ನು ಮಂಡಳಿಯು ಅನುಮೋದಿಸಿರಲಿಲ್ಲ.

ಆರ್ಥಿಕತೆಯ ಬೆಳವಣಿಗೆಯ ದರಕ್ಕಿಂತ ಚಲಾವಣೆಯಲ್ಲಿದ್ದ ಹೆಚ್ಚುವರಿ ನೋಟುಗಳ ಪ್ರಮಾಣ ತಗ್ಗಿಸುವ, ಕಪ್ಪು ಹಣಕ್ಕೆ ಕಡಿವಾಣ ಹಾಕುವ, ಪರ್ಯಾಯ ಆರ್ಥಿಕತೆ ಮಟ್ಟ ಹಾಕಲು ಕರಡು ಪ್ರಸ್ತಾವನೆಯಲ್ಲಿ ಹಣಕಾಸು ಸಚಿವಾಲಯ ನೀಡಿದ್ದ ಬಹುತೇಕ ಕಾರಣಗಳನ್ನು ಆರ್‌ಬಿಐ ಮಂಡಳಿ ಒಪ್ಪಿರಲಿಲ್ಲ.

ಕಪ್ಪು ಹಣವು ಚಲಾವಣೆಯಲ್ಲಿ ಇರುವ ನೋಟುಗಳ ಬದಲಿಗೆ ಹೆಚ್ಚಾಗಿ ರಿಯಲ್‌ ಎಸ್ಟೇಟ್‌ ವಹಿವಾಟು ಮತ್ತು ಚಿನ್ನದ ರೂಪದಲ್ಲಿ ಇದೆ. ಹೀಗಾಗಿ ನೋಟು ರದ್ದತಿಯು ಉದ್ದೇಶಿತ ಪರಿಣಾಮ ಬೀರುವುದಿಲ್ಲ. ಇದರಿಂದ ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬುದು ಆರ್‌ಬಿಐ ನಿರ್ದೇಶಕರ ಅಭಿಪ್ರಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.