ನವದೆಹಲಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ವರದಿಗಳು ಬುಧವಾರ ಇನ್ನಷ್ಟು ಸ್ಪಷ್ಟತೆ ಪಡೆದುಕೊಂಡಿವೆ. ಆರ್‌ಬಿಐ ಕಾಯ್ದೆಯ ಸೆಕ್ಷನ್ 7 ಬಳಸಿ ಒತ್ತಡ ಹೇರಲಾಗುತ್ತಿದೆ ಎಂದೂ ವರದಿಗಳಲ್ಲಿ ಹೇಳಲಾಗಿದೆ.
ಕೇಂದ್ರ ಮತ್ತು ಆರ್‌ಬಿಐನ ಕಾರ್ಯನಿರ್ವಹಣೆಯು ಸಾರ್ವಜನಿಕ ಹಿತಾಸಕ್ತಿ ಮತ್ತು ಅರ್ಥ ವ್ಯವಸ್ಥೆಯ ಅಗತ್ಯಗಳಿಗೆ ಪೂರಕವಾಗಿ ಇರಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಸರ್ಕಾರ ಮತ್ತು ಆರ್‌ಬಿಐ ನಡುವೆ ವ್ಯಾಪಕವಾದ ಸಮಾಲೋಚನೆಗಳು ನಡೆಯುತ್ತಿರುತ್ತವೆ. ಈ ಸಮಾಲೋಚನೆಗಳನ್ನು ಯಾವತ್ತೂ ಬಹಿರಂಗಪಡಿಸಲಾಗುವುದಿಲ್ಲ. ಅಂತಿಮ ನಿರ್ಧಾರಗಳು ಮಾತ್ರ ಬಹಿರಂಗವಾಗುತ್ತವೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ಕೊಟ್ಟಿದೆ.
ಸೆಕ್ಷನ್ ಏಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಉಲ್ಲೇಖ ಸಚಿವಾಲಯದ ಸ್ಪಷ್ಟನೆಯಲ್ಲಿ ಇಲ್ಲ.ಆದರೆ ಒಂದಕ್ಕಿಂತ ಹೆಚ್ಚು ಬಾರಿ ಸೆಕ್ಷನ್ ಏಳರ ಅಡಿಯಲ್ಲಿ ಆರ್‌ಬಿಐಗೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ಆರ್‌ಬಿಐನ ಹೇಳಿಕೆಗಳನ್ನು ಗಮನಿಸಿದರೆ ವಿಚಾರ ಸಂಕೀರ್ಣವಾಗಿದೆ ಎಂಬುದು ಮನವರಿಕೆ ಆಗುತ್ತದೆ. ತನ್ನ ಸ್ವಾಯತ್ತೆಯನ್ನು ಕೇಂದ್ರವು ನಿರ್ಲಕ್ಷಿಸುತ್ತಿದೆ ಎಂದು ಆರ್‌ಬಿಐ ಆರೋಪಿಸಿದೆ. ಆರ್‌ಬಿಐ ತನ್ನ ಸ್ವಾಯತ್ತೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದುಹಣಕಾಸು ಸಚಿವಾಲಯ ತಿರುಗೇಟು ನೀಡಿದೆ.
ಆರ್‌ಬಿಐ ಕಾಯ್ದೆಯ ಸೆಕ್ಷನ್ 7 ಏನೆನ್ನುತ್ತದೆ?
ಆರ್‌ಬಿಐ ಗವರ್ನರ್ ಜತೆಗೆ ಸಮಾಲೋಚನೆ ನಡೆಸಿ ಸಾರ್ವಜನಿಕ ಹಿತಾಸಕ್ತಿಗಾಗಿ ಆಯಾ ಸಂದರ್ಭಕ್ಕೆ ತಕ್ಕಂತಹ ನಿರ್ದೇಶನಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಈ ಸೆಕ್ಷನ್ ಅಧಿಕಾರ ಕೊಡುತ್ತದೆ. ಈ ಸೆಕ್ಷನ್‌ನ ಬಳಕೆಯನ್ನು ಆರ್‌ಬಿಐ ಮೇಲೆ ಹಸ್ತಕ್ಷೇಪ ಎಂದೇ ಪರಿಗಣಿಸಲಾಗುತ್ತದೆ. 1934ರಲ್ಲಿ ರಚನೆಯಾದ ಕಾಯ್ದೆಯ ಈ ಸೆಕ್ಷನ್ ಅನ್ನು ಈವರೆಗೆ ಯಾವ ಸರ್ಕಾರವೂ ಬಳಸಿಕೊಂಡಿಲ್ಲ ಎನ್ನಲಾಗಿದೆ.ಆರೋಪ: ಸರ್ಕಾರದ ಧೋರಣೆಗಳನ್ನು ಜಾರಿಗೆ ತರುವಂತೆ ಆರ್‌ಬಿಐ ಮೇಲೆ ಒತ್ತಡ ಹೇರಲು ಆರ್‌ಬಿಐ ಕಾಯ್ದೆಯ ಏಳನೇ ಸೆಕ್ಷನ್ ಅನ್ನು ಕೇಂದ್ರ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಆರೋಪಿಸಿದ್ದಾರೆ.
‘ಒಂದು ವೇಳೆ ಕೇಂದ್ರ ಸರ್ಕಾರವು ಈ ಸೆಕ್ಷನ್ ಅಡಿ ಆರ್‌ಬಿಐಗೆ ನಿರ್ದೇಶನ ನೀಡಿರುವುದು ನಿಜವಾಗಿದ್ದರೆ, ಆರ್ಥಿಕತೆ ಬಗ್ಗೆ ಸರ್ಕಾರವು ಕೆಲ ಸಂಗತಿಗಳನ್ನು ಮುಚ್ಚಿಡುತ್ತಿದೆ’ ಎಂದು ಭಾವಿಸಬೇಕಾಗುತ್ತದೆ ಎಂದಿದ್ದಾರೆ.
ವಿವಾದದ ಮೂಲ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ದುರ್ಬಲ ನಿರ್ವಹಣೆ, ಮಾರುಕಟ್ಟೆಯಲ್ಲಿ ಉದ್ಭವಿಸಿರುವ ನಗದು ಪೂರೈಕೆ ಕೊರತೆ ಮತ್ತು ವಿದ್ಯುತ್ ವಲಯದಲ್ಲಿನ ವಸೂಲಾಗದ ಸಾಲದ ಸಮಸ್ಯೆ ಇತ್ಯರ್ಥಪಡಿಸುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ನಡೆಯುತ್ತಿದೆ.
ಈ ವಿದ್ಯಮಾನಗಳಲ್ಲಿ ಆರ್‌ಬಿಐ ತನ್ನ ಆದೇಶ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದೇ ಕಾರಣಕ್ಕೆ ಆರ್‌ಬಿಐ ಗವರ್ನರ್ ಹುದ್ದೆ ತೊರೆಯಲು ಉರ್ಜಿತ್ ಪಟೇಲ್ ನಿರ್ಧರಿಸಿದ್ದರು ಎಂದು ವರದಿಯಾಗಿತ್ತು. ಪಟೇಲ್ ಅವರು ಹುದ್ದೆ ತೊರೆಯುವುದಿಲ್ಲ. ವಿವಾದದ ವಿಷಯಗಳನ್ನು ಚರ್ಚಿಸಲು ಇದೇ 19ರಂದು ನಿರ್ದೇಶಕ ಮಂಡಳಿಯ ಸಭೆ ಕರೆದಿದ್ದಾರೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ದರ ಕಡಿತದ ದ್ವಂದ್ವ
ಬಡ್ಡಿದರ ಕಡಿತದ ಬಗ್ಗೆಯೂ ಆರ್‌ಬಿಐ ಮತ್ತು ಕೇಂದ್ರದ ನಡುವೆ ಕಿತ್ತಾಟ ಇದೆ. ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸಲು ಬಡ್ಡಿದರ ಕಡಿತಗೊಳಿಸಬೇಕು ಎಂದು ಕೇಂದ್ರ ಒತ್ತಾಯಿಸುತ್ತಲೇ ಇದೆ. ಆದರೆ ಉರ್ಜಿತ್ ಪಟೇಲ್ ಅವರು ಈ ಒತ್ತಾಯಕ್ಕೆ ಕಿವಿಗೊಡುತ್ತಿಲ್ಲ ಎಂಬುದು ಕೇಂದ್ರದ ಅತೃಪ್ತಿಗೆ ಮತ್ತೊಂದು ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.