ಬ್ಯಾಂಕಾಕ್/ನವದೆಹಲಿ: ಕರ್ನಾಟಕದಲ್ಲಿ ರೈತರ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸದ್ಯ ಸಹಿ ಬೀಳುವ ಸಾಧ್ಯತೆ ಇಲ್ಲ.
ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ನಡುವೆ ಸುಂಕರಹಿತ ವ್ಯಾಪಾರಕ್ಕೆ ಅನುವು ಮಾಡಿಕೊಡಲಿದ್ದ ಆರ್‌ಸಿಇಪಿ ಅಂತಿಮಗೊಳ್ಳುವುದು ಮತ್ತಷ್ಟು ವಿಳಂಬವಾಗಿದೆ. ಈ ಒಪ್ಪಂದಕ್ಕೆ ಸಹಿ ಮಾಡಲು ಭಾರತವು ಹೊಸ ಷರತ್ತುಗಳನ್ನುಹಾಕಿದ ಕಾರಣ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.
ಆರ್‌ಸಿಇಪಿ ಶೃಂಗಸಭೆಯ ಸಲುವಾಗಿ ಭಾನುವಾರ ಹೊರಡಿಸಲಾದ ಜಂಟಿ ಕರಡು ಹೇಳಿಕೆಯಲ್ಲಿ ಈ ಮಾಹಿತಿ ಇದೆ.2020ರ ಫೆಬ್ರುವರಿಯಲ್ಲಿ ಒಪ್ಪಂದಕ್ಕೆ ಎಲ್ಲಾ ರಾಷ್ಟ್ರಗಳು ಸಹಿ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಸೋಮವಾರ ತಾತ್ಕಾಲಿಕ ಒಪ್ಪಂದ ಘೋಷಿಸುವ ಸಾಧ್ಯತೆ ಇದೆ.
ಸುಂಕರಹಿತ ವ್ಯಾಪಾರಕ್ಕೆ ಅನುವು ಮಾಡಿಕೊಡುವುದರಿಂದ ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ದೇಶದ ಹಲವು ರೈತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಈ ಒಪ್ಪಂದವನ್ನು ವಿರೋಧಿಸಿದ್ದವು.
ಆಸಿಯಾನ್ ಗುಂಪಿನ 10 ರಾಷ್ಟ್ರಗಳು ಮತ್ತು ಚೀನಾ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯ ಹಾಗೂ ಭಾರತ ಈ ಒಪ್ಪಂದ ಮೂಲಕ ಜಗತ್ತಿನ ಅತ್ಯಂತ ದೊಡ್ಡ ವಾಣಿಜ್ಯ ಒಕ್ಕೂಟವನ್ನು ರಚಿಸಲು ಉತ್ಸುಕವಾಗಿವೆ. ಈ ಸಲುವಾಗಿ ಇಷ್ಟೂ ರಾಷ್ಟ್ರಗಳ ಮುಖ್ಯಸ್ಥರು ಭಾನುವಾರ ಇಲ್ಲಿ ಸಭೆ ನಡೆಸಿದರು. ಸೋಮವಾರ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
‘ಒಪ್ಪಂದ ಬಹುತೇಕ ಅಂತಿಮಗೊಂಡಿತ್ತು. ಆದರೆ, ಒಂದು ರಾಷ್ಟ್ರವು ಹೊಸ ಬೇಡಿಕೆಗಳನ್ನು ಮುಂದಿಟ್ಟಿತು. ಆ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಹೀಗಾಗಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ’ ಎಂದು ಕರಡು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಪಟ್ಟು ಬಿಡದ ಭಾರತ
ಈ ಒಪ್ಪಂದದ ಪ್ರಕಾರ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಪೂರ್ಣ ಪ್ರಮಾಣದಲ್ಲಿ ರದ್ದು ಮಾಡಬೇಕು.ಆಸಿಯಾನ್ ರಾಷ್ಟ್ರಗಳಿಂದ ಆಮದಾಗುವ ಶೇ 90ರಷ್ಟು, ಚೀನಾದಿಂದ ಆಮದಾಗುವ ಶೇ 74ರಷ್ಟು ಸರಕುಗಳ ಮೇಲಿನ ಸುಂಕವನ್ನು ಮಾತ್ರ ರದ್ದುಪಡಿಸಲಾಗುವುದು. ಉಳಿದ ಸರಕುಗಳ ಮೇಲೆ ಇನ್ನೂ 20 ವರ್ಷ ಸುಂಕ ವಿಧಿಸಲಾಗುವುದು ಎಂದು ಭಾರತ ಮೊದಲಿನಿಂದಲೂ ಪಟ್ಟು ಹಿಡಿದಿದೆ. ಹೀಗಾಗಿಯೇ 2012ರಲ್ಲಿ ಮಾತುಕತೆ ಆರಂಭವಾಗಿದ್ದರೂ ಈವರೆಗೆ ಒಪ್ಪಂದ ಅಂತಿಮವಾಗಿಲ್ಲ ಎಂದು ಮೂಲಗಳು ಹೇಳಿವೆ.
‘ಭಾರತವನ್ನು ಹೊರಗಿಡಿ’
ವಿಪರೀತದ ಷರತ್ತುಗಳನ್ನು ಒಡ್ಡುತ್ತಿರುವ ಕಾರಣ, ಭಾರತವನ್ನು ಹೊರಗಿಟ್ಟು ಆರ್‌ಸಿಇಪಿ ಒಕ್ಕೂಟ ರಚಿಸಿಕೊಳ್ಳುವ ಪ್ರಸ್ತಾವವನ್ನು ಶೃಂಗಸಭೆಯಲ್ಲಿ ಇಡಲಾಗಿತ್ತು. ಆದರೆ ಭಾರತವನ್ನು ಆರ್‌ಸಿಇಪಿಯಿಂದ ಹೊರಗೆ ಇಟ್ಟರೆ, ಒಕ್ಕೂಟದಲ್ಲಿ ಚೀನಾ ಮೇಲುಗೈ ಸಾಧಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಕಾರಣದಿಂದ, ಈ ಪ್ರಸ್ತಾವಕ್ಕೆ ಬೆಂಬಲ ವ್ಯಕ್ತವಾಗಿಲ್ಲ.
**
ಆಸಿಯಾನ್ ರಾಷ್ಟ್ರಗಳ ಆರ್ಥಿಕತೆ ವೈವಿಧ್ಯವಾಗಿದೆ. ಅಲ್ಲಿನ ಮಾರುಕಟ್ಟೆ ಭಾರತದ ಹಿತಾಸಕ್ತಿಗೆ ಪೂರಕವಾಗಿದೆ. ಈ ರಾಷ್ಟ್ರಗಳ ಜತೆಗಿನ ಈಗಿನ ಸಹಕಾರವನ್ನು ಬಲಪಡಿಸಬೇಕು.
-ನರೇಂದ್ರ ಮೋದಿ, ಪ್ರಧಾನಿ
**
ಒಪ್ಪಂದದ 20 ಅಧ್ಯಾಯಗಳು ಪೂರ್ಣಗೊಂಡಿವೆ. ಆದರೆ ಕೆಲವು ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಒಪ್ಪಂದ ನಡೆಯಬೇಕಿದೆ. ಹೀಗಾಗಿ ಒಪ್ಪಂದ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.
-ಪ್ರಯೂಟ್ ಚನ್, ಥಾಯ್ಲೆಂಡ್ ಪ್ರಧಾನಿ
**
ಈ ಒಕ್ಕೂಟದ ಭಾಗವಾದರೆ, ಆಗ್ನೇಯ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಗೆ ಪ್ರವೇಶಿಸುವ ಅವಕಾಶ ಭಾರತಕ್ಕೆ ದೊರೆಯುತ್ತದೆ. ಈ ಅವಕಾಶವನ್ನು ಬಿಡಬಾರದು.
-ಭಾರತೀಯ ಕೈಗಾರಿಕೆಗಳ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.