ADVERTISEMENT

ತೆಲಂಗಾಣ ಪ್ಲಸ್ ಟು ಉತ್ತರ ಪತ್ರಿಕೆ ಮರು ಮೌಲ್ಯಮಾಪನ; 1,137 ವಿದ್ಯಾರ್ಥಿಗಳು ಪಾಸ್

​ಪ್ರಜಾವಾಣಿ ವಾರ್ತೆ
Published 28 ಮೇ 2019, 14:29 IST
Last Updated 28 ಮೇ 2019, 14:29 IST
   

ಹೈದರಾಬಾದ್: ತೆಲಂಗಾಣ ಸ್ಟೇಟ್ ಬೋರ್ಡ್ ಆಫ್ ಇಂಟರ್‌ಮಿಡಿಯೇಟ್ ಎಡ್ಯುಕೇಶನ್ (TSBIE) ಸೋಮವಾರ ರಾತ್ರಿ ಹೈಯರ್ ಸೆಕೆಂಡರಿ ಪರೀಕ್ಷೆಯ ಉತ್ತರ ಪತ್ರಿಕೆಯಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಿಸಿದೆ.3.8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 23 ವಿದ್ಯಾರ್ಥಿಗಳು ಕಳೆದ ತಿಂಗಳು ಆತ್ಮಹತ್ಯೆ ಮಾಡಿದ್ದರು.ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಅಂಕದಲ್ಲಿ ಮರು ಮೌಲ್ಯಮಾಪನದಿಂದ ಏನೂ ಬದಲಾವಣೆ ಆಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಮರು ಮೌಲ್ಯಮಾಪನದಲ್ಲಿ 1,137 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೋರ್ಡ್ ಆಫ್ ಇಂಟರ್‌ಮಿಡಿಯೇಟ್ ಎಡ್ಯುಕೇಶನ್ (ಬಿಐಇ) ಏಪ್ರಿಲ್ 18ರಂದು ಫಲಿತಾಂಶ ಪ್ರಕಟಿಸಿತ್ತು.

9.43 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಇದರಲ್ಲಿ 5.60 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಹಲವಾರು ತಪ್ಪುಗಳು ಕಂಡು ಬಂದಿದ್ದರಿಂದ ಸಾರ್ವಜನಿಕರು ಪರೀಕ್ಷಾ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದರು.
ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದಾಗ ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು.

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿದಾಗ ಫೇಲಾದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಉಚಿತವಾಗಿ ಮರು ಮೌಲ್ಯಮಾಪನ ನಡೆಸುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಏಪ್ರಿಲ್ 24ರಂದು ಹೇಳಿದ್ದರು.

ADVERTISEMENT

ಬಿಐಇ ಕಾರ್ಯದರ್ಶಿಯ ಎಂ.ಅಶೋಕ್ ಪ್ರಕಾರ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದು, ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನ ನಡೆಸಿದ್ದರು. 23 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾದವರಾಗಿದ್ದಾರೆ.ತಾವು ಬಯಸಿದ ಅಂಕ ಸಿಗಲಿಲ್ಲ ಎಂಬ ಕಾರಣದಿಂದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಬ್ಬ ವಿದ್ಯಾರ್ಥಿ 6 ಪರೀಕ್ಷೆಗಳಲ್ಲಿ ಮೂರು ಪರೀಕ್ಷೆ ಬರೆದಿದ್ದು, ಮೂರೂ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.