ADVERTISEMENT

ಉಕ್ರೇನ್‌ ಯುದ್ಧದಲ್ಲಿ ರಷ್ಯಾ ಸೇನೆ ಜೊತೆಗಿದ್ದ ತೆಲಂಗಾಣದ ಯುವಕ ಸಾವು

ಏಜೆಂಟ್‌ ವಂಚನೆಯಿಂದ ರಷ್ಯಾ ಸೇನೆಗೆ ಬಲವಂತದ ನೇಮಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 16:13 IST
Last Updated 6 ಮಾರ್ಚ್ 2024, 16:13 IST
<div class="paragraphs"><p>ಉಕ್ರೇನ್‌ ಪೂರ್ವದ&nbsp;ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ನಡುವಿನ ಯುದ್ಧ</p></div>

ಉಕ್ರೇನ್‌ ಪೂರ್ವದ ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ಮತ್ತು ಉಕ್ರೇನ್‌ ಪಡೆಗಳ ನಡುವಿನ ಯುದ್ಧ

   

ಹೈದರಾಬಾದ್‌ : ಬಲವಂತದಿಂದ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರು ಯುವಕರ ಪೈಕಿ ಒಬ್ಬ ರಷ್ಯಾ–ಉಕ್ರೇನ್‌ ನಡುವಿನ ಯುದ್ಧದಲ್ಲಿ ಮಡಿದಿದ್ದಾನೆ.

ಹೈದರಾಬಾದ್‌ನ ಹಳೆನಗರದ ಬಜಾರ್ ಘಾಟ್‌ನ ಮೊಹಮ್ಮದ್ ಅಸ್ಫಾನ್ (30) ಮತ್ತು ನಾರಾಯಣಪೇಟೆಯ ಮೊಹಮ್ಮದ್ ಸೂಫಿಯಾನ್ ಅವರು ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ತೆರಳಿದ್ದರು. ಇದರಲ್ಲಿ ಅಸ್ಫಾನ್ ಮೃತಪಟ್ಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಿಬ್ಬಂದಿಯೊಬ್ಬರು ಬುಧವಾರ ಅಸ್ಫಾನ್‌ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ADVERTISEMENT

‘ಈಗ ನಾನು ಏನನ್ನೂ ಮಾತನಾಡುವುದಿಲ್ಲ. ನಾವು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಅಸ್ಫಾನ್‌ ಅವರ ಸಹೋದರ ಮೊಹಮ್ಮದ್ ಇಮ್ರಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಪಸಾಗುವೆ ಎಂದಿದ್ದ ಅಸ್ಫಾನ್‌

ಸಣ್ಣ ವ್ಯಾಪಾರ ನಡೆಸುತ್ತಿರುವ ಇಮ್ರಾನ್, ಹೈದರಾಬಾದ್‌ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದರನಿಗೆ ರಷ್ಯಾ ಸೇನೆಯಲ್ಲಿ ಸಹಾಯಕ ಉದ್ಯೋಗ ನೀಡುವುದಾಗಿ ದುಬೈನ ಏಜೆಂಟ್‌ ಒಬ್ಬರು ವಂಚಿಸಿದ್ದಾರೆ ಎಂದು ಕೆಲವು ದಿನಗಳ ಹಿಂದೆ ತಿಳಿಸಿದ್ದರು.

ಕಳೆದ ನವೆಂಬರ್‌ನಲ್ಲಿ ಅಸ್ಫಾನ್‌ ಇತರ ಇಬ್ಬರೊಂದಿಗೆ ಚೆನ್ನೈನಿಂದ ಶಾರ್ಜಾ ಮೂಲಕ ಮಾಸ್ಕೊಗೆ ತೆರಳಿದ್ದರು. ಕಳೆದ ಡಿಸೆಂಬರ್ 31ರಂದು ಅಸ್ಫಾನ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಹೈದರಾಬಾದ್‌ಗೆ ವಾಪಸ್‌ ಬರುವುದಾಗಿ ತಿಳಿಸಿದ್ದನ್ನು ಇಮ್ರಾನ್‌ ಖಚಿತಪಡಿಸಿದ್ದರು.

ಡಿಸೆಂಬರ್ ನಂತರ ಅಸ್ಫಾನ್‌ ಅವರು ಕುಟುಂಬ ಸದಸ್ಯರ ಸಂಪರ್ಕಕ್ಕೆ ಸಿಕ್ಕಿಲ್ಲ. ಹಾಗಾಗಿ, ಅನುಮಾನಗೊಂಡು ನಾಮಪಲ್ಲಿ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದಲ್ಲಿ ಹೆಚ್ಚಿನ ಪ್ರಗತಿ ಕಾಣದ ಕಾರಣ ಅವರು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ಸಂಪರ್ಕಿಸಿದ್ದರು.

ಇಮ್ರಾನ್ ಕೂಡ ತನ್ನ ಸಹೋದರನನ್ನು ಪತ್ತೆಹಚ್ಚಿ, ಕರೆತರಲು ಮಾಸ್ಕೊಗೆ ಹೋಗಲು ಸಿದ್ಧರಾಗಿದ್ದರು. ಅಷ್ಟರಲ್ಲಿ ಅವರ ಸಾವಿನ ಮಾಹಿತಿ ಬಂದಿದೆ. 

ಪ್ರಕರಣ ಬಯಲಿಗೆ ಬಂದ ಬಗೆ?

ಈ ವಿಷಯ ಕುರಿತು ಓವೈಸಿಯವರು ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದಿದ್ದರು. ಉದ್ಯೋಗ ಕೊಡಿಸುವ ಏಜೆಂಟರ ವಂಚನೆಯ ಜಾಲದಲ್ಲಿ ಸಿಲುಕಿ ಭಾರತದ ಸುಮಾರು 20 ಯುವಕರು ರಷ್ಯಾ ಸೇನೆಯಲ್ಲಿ ಸಹಾಯಕರ ಕೆಲಸಕ್ಕೆ ಸೇರಿದ್ದಾರೆ. ಇದರಲ್ಲಿ ಇಬ್ಬರು ತೆಲಂಗಾಣದ ಯುವಕರು ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಇತ್ತೀಚೆಗಷ್ಟೇ ದೃಢಪಡಿಸಿತ್ತು.

‘ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ದುಬೈನ ಏಜೆಂಟ್ ಫೈಸಲ್ ಖಾನ್ ಎಂಬಾತ ತನ್ನ ಸಹೋದರನಿಗೆ ರಷ್ಯಾದ ಸೇನೆಯಲ್ಲಿ ಸಹಾಯಕ ಕೆಲಸಕ್ಕೆ ಆರಂಭದಲ್ಲಿ ತಿಂಗಳಿಗೆ ₹30 ಸಾವಿರ ಮತ್ತು ನಂತರ ₹1.5 ಲಕ್ಷ ಸಂಬಳ ನೀಡುವುದಾಗಿ ಭರವಸೆ ನೀಡಿದ್ದ. ಆತನಿಗೆ ನನ್ನ ಸಹೋದರ ₹3 ಲಕ್ಷ ಹಣ ಕೊಟ್ಟಿದ್ದಾನೆ. ಮಾಸ್ಕೊ ತಲುಪಿದ ಅಸ್ಫಾನ್‌ನನ್ನು ಇತರರೊಂದಿಗೆ ಉಕ್ರೇನ್ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ರೋಸ್ಟೊವ್-ಆನ್-ಡಾನ್‌ಗೆ ಕರೆದೊಯ್ಯಲಾಗಿದೆ. ಆರಂಭದಲ್ಲಿ ಬಲವಂತವಾಗಿ ಆತನನ್ನು ಸೈನ್ಯದ ತರಬೇತಿ ಶಿಬಿರಕ್ಕೆ ಸೇರಿಸಿ, ನಂತರ ಯುದ್ಧಭೂಮಿಗೆ ದೂಡಿದ್ದಾರೆ. ಅಸ್ಫಾನ್‌ಗೆ ಪತ್ನಿ ಮತ್ತು ಎಂಟು ತಿಂಗಳ ಹೆಣ್ಣು ಮಗು ಮತ್ತು ಎರಡು ವರ್ಷದ ಗಂಡು ಮಗು ಇದೆ’ ಎಂದು ಇಮ್ರಾನ್‌ ಇತ್ತೀಚೆಗೆ ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.