ADVERTISEMENT

ಜಯಲಲಿತಾ ಸಾವಿನ ಯಾವುದೇ ತನಿಖೆಗೆ ಸಿದ್ಧ: ವಿ.ಕೆ. ಶಶಿಕಲಾ 

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 14:19 IST
Last Updated 19 ಅಕ್ಟೋಬರ್ 2022, 14:19 IST
ವಿ.ಕೆ. ಶಶಿಕಲಾ
ವಿ.ಕೆ. ಶಶಿಕಲಾ   

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಸಾವಿನ ರಹಸ್ಯದ ಕುರಿತುಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ. ಅರುಮುಗಸ್ವಾಮಿ ನೇತೃತ್ವದ ಏಕ ಸದಸ್ಯ ಆಯೋಗದ ವರದಿಯಲ್ಲಿರುವ ತಮ್ಮ ವಿರುದ್ಧದ ಆರೋಪಗಳನ್ನು ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಅಲ್ಲಗಳೆದಿದ್ದಾರೆ. ‘ಇದರಲ್ಲಿ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾದ ಆಯೋಗದ ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು, ಕ್ರಮ ಕೈಗೊಳ್ಳುವುದಾಗಿ ಡಿಎಂಕೆ ಸರ್ಕಾರ ನಿರ್ಧಾರ ಪ್ರಕಟಿಸಿದ ನಂತರ ಪ್ರತಿಕ್ರಿಯಿಸಿರುವ ಶಶಿಕಲಾ ‘ಅಮ್ಮನ (ಜಯಲಲಿತಾ) ಸಾವಿನಲ್ಲಿ ಯಾವುದೇ ರಹಸ್ಯವಿಲ್ಲವೆಂಬುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ಅಮ್ಮನ ಸಾವನ್ನು ರಾಜಕೀಯಗೊಳಿಸಲಾಗುತ್ತಿದೆ. ಇಂತಹ ನಿರ್ಲಜ್ಜ ರಾಜಕಾರಣವನ್ನು ಜನರು ಒಪ್ಪುವುದಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನನ್ನ ವಿರುದ್ಧ ಆಯೋಗ ಮಾಡಿರುವ ಆರೋಪಗಳನ್ನು ಸಂಪೂರ್ಣ ತಿರಸ್ಕರಿಸುತ್ತೇನೆ. ಈ ಸಂಬಂಧಯಾವುದೇ ವಿಚಾರಣೆಗೂ ನಾನು ಸಿದ್ಧ. ಆಯೋಗವು ಊಹಾಪೋಹಾ ಆಧರಿಸಿ ನೀಡಿದ ವರದಿಯನ್ನು ಜನರು ನಂಬುವುದಿಲ್ಲ. ಜಯಲಲಿತಾ ಅವರ ಚಿಕಿತ್ಸೆಯ ಎಲ್ಲ ನಿರ್ಧಾರಗಳನ್ನು ಅಪೊಲೊ ಆಸ್ಪತ್ರೆ ವೈದ್ಯರುಏಮ್ಸ್‌ (ಎಐಐಎಂಎಸ್‌) ವೈದ್ಯರೊಂದಿಗೆ ಸಮಾಲೋಚಿಸಿಯೇ ತೆಗೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಜಯಲಲಿತಾ ಅವರ ಚಿಕಿತ್ಸೆಯ ಶಿಷ್ಟಾಚಾರದಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಅಲ್ಲಗಳೆದಿರುವ ಶಶಿಕಲಾ ‘ವೈದ್ಯರ ಕರ್ತವ್ಯ ಅಥವಾ ಅವರ ನಿರ್ಧಾರಗಳಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಅಮ್ಮನ ಚಿಕಿತ್ಸೆ ಸಂಬಂಧ ವೈದ್ಯರಿಗೆ ಸಲಹೆ ನೀಡಲು ನನಗೆ ವೈದ್ಯಕೀಯ ಜ್ಞಾನವೂ ಇಲ್ಲ. ಆಗ ನನಗಿದ್ದ ಏಕೈಕ ಉದ್ದೇಶವೆಂದರೆ, ಅಕ್ಕನಿಗೆ ಉತ್ತಮ ಚಿಕಿತ್ಸೆ ಕೊಡಿಸುವುದು ಮತ್ತು ಆಕೆ ಚೇತರಿಸಿಕೊಂಡು ಆರೋಗ್ಯವಾಗಿ ಮನೆಗೆ ಮರಳಬೇಕೆನ್ನುವುದಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ವಿದೇಶಕ್ಕೆ ಕರೆದೊಯ್ಯುವುದಕ್ಕೆ ನನ್ನ ವಿರೋಧವಿರಲಿಲ್ಲ’ ಎಂದು ಹೇಳಿದ್ದಾರೆ.

ಜಯಲಲಿತಾ ಅವರು 2016ರಲ್ಲಿ ಸಾಯುವುದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿರುವ ಆಯೋಗವು, ಜಯಾಲಲಿತಾ ಅವರಿಗೆ ಆಪ್ತರಾಗಿದ್ದ ವಿ.ಕೆ.ಶಶಿಕಲಾ ಮತ್ತುಜಯಲಲಿತಾ ಸಾಯುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಸಿ. ವಿಜಯಭಾಸ್ಕರ್‌, ವೈದ್ಯ ಕೆ.ಎಸ್‌. ಶಿವಕಮಾರ್‌ (ಇವರುಶಶಿಕಲಾಅವರ ಸಂಬಂಧಿ), ಆರೋಗ್ಯ ಕಾರ್ಯದರ್ಶಿಯಾಗಿದ್ದ ಜೆ.ರಾಧಾಕೃಷ್ಣನ್‌ ಅವರ ಪಾತ್ರದ ಕುರಿತೂ ತನಿಖೆ ಆಗಬೇಕೆಂದು ವರದಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.