ADVERTISEMENT

ದೆಹಲಿಯಂತೆ 'ಅರ್ಧ-ರಾಜ್ಯ' ಜಮ್ಮು-ಕಾಶ್ಮೀರದಲ್ಲಿ ಒಮರ್‌ಗೆ ಬೆಂಬಲ: ಕೇಜ್ರಿವಾಲ್

ಪಿಟಿಐ
Published 13 ಅಕ್ಟೋಬರ್ 2024, 12:42 IST
Last Updated 13 ಅಕ್ಟೋಬರ್ 2024, 12:42 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ದೋಡಾ: 'ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಕೂಡ ದೆಹಲಿಯಂತೆ 'ಅರ್ಧ-ರಾಜ್ಯ' ಆಗಿದ್ದು, ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಏನೇ ಸಮಸ್ಯೆ ಬಂದರೂ ಅನುಭವ ಹಂಚಿಕೊಳ್ಳಲು ಸಿದ್ಧವಾಗಿದ್ದೇನೆ' ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮಾತನಾಡಿದ ಅವರು, 'ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅಧಿಕಾರ ವಹಿಸಲಿದ್ದಾರೆ. 'ಇಂಡಿಯಾ' ಮೈತ್ರಿಕೂಟದ ಮುಖ್ಯಮಂತ್ರಿಯಾಗಿರುವುದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಶಸ್ವಿ ಸರ್ಕಾರ ನಡೆಸಲು ಅವರಿಗೆ ಬೇಕಾದ ಎಲ್ಲ ಬೆಂಬಲವನ್ನು ನೀಡುತ್ತೇವೆ. ಒಮರ್ ಅಬ್ದುಲ್ಲಾ ನಾಯಕತ್ವದಲ್ಲಿ ಜಮ್ಮು-ಕಾಶ್ಮೀರ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂಬ ನಿರೀಕ್ಷೆ ಇದೆ' ಎಂದು ಹೇಳಿದ್ದಾರೆ.

'ಮುಖ್ಯಮಂತ್ರಿಗೆ ಸೀಮಿತ ಅಧಿಕಾರ ಇರುವುದರಿಂದ ದೆಹಲಿಯನ್ನು 'ಅರ್ಧ-ರಾಜ್ಯ' ಎಂದು ಕರೆಯಲಾಗುತ್ತದೆ. ಈಗ ಜಮ್ಮು-ಕಾಶ್ಮೀರವನ್ನು ಬಿಜೆಪಿ ಅರ್ಧ-ರಾಜ್ಯವನ್ನಾಗಿ ಮಾಡಿದೆ. ಏನೆಂದರೆ ಚುನಾಯಿತ ಸರ್ಕಾರಕ್ಕೆ ಸೀಮಿತ ಅಧಿಕಾರವಿದ್ದು, ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವಿದೆ. ತಮ್ಮ ಕೆಲಸದಲ್ಲಿ ಏನೇ ತೊಂದರೆಗಳು ಎದುರಾದರೂ ನನ್ನನ್ನು ಸಂಪರ್ಕಿಸಿ ಎಂದು ನಾನು ಒಮರ್‌ಗೆ ಹೇಳಲು ಬಯಸುತ್ತೇನೆ. ಏಕೆಂದರೆ ಕಳೆದ 10 ವರ್ಷಗಳಿಂದ ನಾನು ದೆಹಲಿ ಸರ್ಕಾರವನ್ನು ಮುನ್ನಡೆಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಜ್ರಿವಾಲ್ ಅಧಿಕಾರದ ಅವಧಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಅನೇಕ ವಿಷಯಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಎಎಪಿಯಿಂದ ಆಯ್ಕೆಯಾಗಿರುವ ಮೊದಲ ಶಾಸಕ ಮೆಹರಾಜ್ ಮಲಿಕ್ ಅವರ ಪರವಾಗಿ ದೋಡಾದಲ್ಲಿ ಕೇಜ್ರಿವಾಲ್ ಧನ್ಯವಾದಗಳನ್ನು ಸಲ್ಲಿಸಿದರು. ದೋಡಾದಲ್ಲಿ ಬಿಜೆಪಿಯ ಗಂಜಯ್ ಸಿಂಗ್ ರಾಣಾ ವಿರುದ್ಧ ಮೆಹರಾಜ್ ಸಿಂಗ್ 4,538 ಮತಗಳ ಅಂತರದಿಂದ ಜಯ ಗಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, 'ಪ್ರತಿ ಚುನಾವಣೆಯಲ್ಲೂ ಜನರು ನಾಯಕರಿಗೆ ಸಂದೇಶ ನೀಡುತ್ತಾರೆ ಎಂದು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದ ಮೋದಿ ಅವರಿಗೆ 240 ಸೀಟುಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಗಿದೆ. ಇದರ ಅರ್ಥವೇನು? ಮೋದಿ ಸರ್ಕಾರದ ಆಡಳಿತವನ್ನು ಜನರು ಇಷ್ಟಪಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.