ನವದೆಹಲಿ: ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣದ ಬೆನ್ನಲ್ಲೇ ಜಮ್ಮು–ಕಾಶ್ಮೀರದ ರಿಯಾಸಿ ಜಿಲ್ಲೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದೆ.
ಎನ್‌ಐಎ ತಂಡವು ರಿಯಾಸಿಯನ್ನು ತಲುಪಿದ್ದು, ತನಿಖೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರೊಂದಿಗೆ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ದಾಳಿಗೆ ಕಾರಣವಾದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪೋನಿ ಪ್ರದೇಶದ ತೇರ್ಯತ್ ಗ್ರಾಮದಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದರ ಮೇಲೆ ಭಾನುವಾರ ಸಂಜೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದು, 33 ಜನರು ಗಾಯಗೊಂಡಿದ್ದರು. ಬಸ್‌ನಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿಯಿಂದ ಬಂದ ಯಾತ್ರಾರ್ಥಿಗಳು ಇದ್ದರು.
₹10 ಲಕ್ಷ ಪರಿಹಾರ ಮೊತ್ತ ಘೋಷಣೆ
ಉಗ್ರರ ದಾಳಿಗೆ ಮೃತಪಟ್ಟ ಯಾತ್ರಾರ್ಥಿಗಳ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರವನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ಮೊತ್ತ ಘೋಷಿಸಲಾಗಿದೆ.
ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಜಿಲ್ಲಾಡಳಿತದಿಂದ ಕಂಟ್ರೋಲ್ ರೂಂ ರಚಿಸಲಾಗಿದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.