ಋಷಿಕೇಶ: ಹಿಮಾಚಲಪ್ರದೇಶದ 6 ಕಾಂಗ್ರೆಸ್‌ನಿಂದ ಅನರ್ಹಗೊಂಡ ಶಾಸಕರನ್ನು ಒಳಗೊಂಡಂತೆ 11 ಶಾಸಕರು, ಬಿಜೆಪಿ ಆಡಳಿತವಿರುವ ಉತ್ತರಾಖಂಡಕ್ಕೆ ಶನಿವಾರ ಬಂದಿಳಿದಿದ್ದು, ಹಿಮಾಲಯದ ತಪ್ಪಲಿನ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಹರಿಯಾಣ ನೋಂದಣಿ ಸಂಖ್ಯೆ ಇರುವ ಬಸ್ಸೊಂದು 6 ಬಂಡಾಯ ಶಾಸಕರು ಹಾಗೂ 3 ಸ್ವತಂತ್ರ ಶಾಸಕರು ಒಳಗೊಂಡಂತೆ 11 ಜನರನ್ನು ಹೊತ್ತು ಋಷಿಕೇಶದ ತಾಜ್ ಹೋಟೆಲ್‌ಗೆ ಶನಿವಾರ ಬೆಳಿಗ್ಗೆ ಬಂದಿಳಿಯಿತು.
ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ರಾಜ್ಯದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಶಿಮ್ಲಾದಲ್ಲಿ ಗುರುವಾರ ಭೇಟಿಯಾಗಿದ್ದರು. ನಂತರ ಸುಖ್ವಿಂದರ್ ಅವರು ದೆಹಲಿಗೆ ದೌಡಾಯಿಸಿ, ವರಿಷ್ಠರಿಗೆ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದರು. ಜತೆಗೆ ಲೋಕಸಭಾ ಚುನಾವಣೆ ಕುರಿತೂ ಚರ್ಚೆ ನಡೆಸಿದ್ದರು.
ವಿಕ್ರಮಾದಿತ್ಯ ಸಿಂಗ್ ಅವರು ಈ ಮೊದಲು ಮಾತನಾಡಿ, ‘ನನ್ನದೇನಿದ್ದರೂ ಬಂಡಾಯ ಶಾಸಕರು ಮತ್ತು ಹೈಕಮಾಂಡ್ ನಡುವಿನ ಮಧ್ಯವರ್ತಿ ಕೆಲಸ. ಸದ್ಯ ಚೆಂಡು ರಾಷ್ಟ್ರೀಯ ನಾಯಕರ ಅಂಗಳದಲ್ಲಿದೆ’ ಎಂದಿದ್ದರು.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲಪ್ರದೇಶದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಗ್ವಿ ಬದಲು ಬಂಡಾಯ ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ ಮಹಜನ್‌ಗೆ ಮತ ಹಾಕಿದ್ದರು. ಅಡ್ಡ ಮತದಾನ ಮಾಡಿದ ಸುಧೀರ್ ಶರ್ಮಾ, ರವಿ ಠಾಕೂರ್, ರಾಜೇಂದ್ರ ರಾಣಾ, ಇಂದ್ರ ದತ್ ಲಖನ್‌ಪಾಲ್, ಚೈತನ್ಯಾ ಶರ್ಮಾ ಹಾಗೂ ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಹಣಕಾಸು ಮಸೂದೆಗೆ ಮತ ಹಾಕದೆ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ವಿಧಾನಸಭಾಧ್ಯಕ್ಷರ ನಡೆ ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಬಿಕ್ಕಟ್ಟಿನ ಅವಲೋಕನ ಹಾಗೂ ಶಮನಕ್ಕೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಮತ್ತು ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಹಿಮಾಚಲಪ್ರದೇಶಕ್ಕೆ ಹೈಕಮಾಂಡ್ ಕಳುಹಿಸಿತ್ತು.
ಈ ಸಮಿತಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ನೀಡಿದ್ದು, ಮುಖ್ಯಮಂತ್ರಿ ಅವರು ರಾಜ್ಯದಲ್ಲಿನ ಬಿಕ್ಕಟ್ಟು ನಿವಾರಿಸುವಲ್ಲಿ ಮತ್ತು ನಾಯಕತ್ವ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಅವರು ಹರಿಯಾಣಕ್ಕೂ ಭೇಟಿ ನೀಡಿ ಕೆಲ ದೇಗುಲಗಳನ್ನು ಸುತ್ತಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.